Dec 30, 2006

ಇಬ್ಬರು ರಾಷ್ಟ್ರಾಧ್ಯಕ್ಷರ ಮರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 12, 2007 ರ ಸಂಚಿಕೆಯಲ್ಲಿನ ಅಂಕಣ ಲೇಖನ)

93 ವರ್ಷದ ತುಂಬು ಜೀವನ ನಡೆಸಿದ ಮುದುಕನೊಬ್ಬ ಕಳೆದ ವಾರ ಅಮೇರಿಕದಲ್ಲಿ ತೀರಿಕೊಂಡ. 93 ವರ್ಷದ ಹಿಂದೆ, ಆ ಮನುಷ್ಯ ಹುಟ್ಟಿದ 16 ದಿನಕ್ಕೆಲ್ಲ ಆ ಮಗುವಿನ ಅಮ್ಮ ತನ್ನ ಗಂಡನನ್ನು ಬಿಟ್ಟು ತನ್ನ ತಂದೆಯ ಮನೆ ಸೇರಿಕೊಂಡಳು. ಕಾರಣ? ಆ ಮಗುವಿನ ಅಪ್ಪ ಮಹಾ ಕುಡುಕನಾಗಿದ್ದ. ಹೆಂಡತಿಯನ್ನು ಗರ್ಭಿಣಿ, ಬಾಣಂತಿ ಎನ್ನದೆ ಹೊಡೆಯುತ್ತಿದ್ದ. "ಮಗುವನ್ನು, ನಿನ್ನನ್ನು ಸಾಸಿಬಿಡುತ್ತೇನೆ" ಎಂದು ಮಾಂಸ ಕಡಿಯುವ ಕತ್ತಿ ಹಿಡಿದು ಮಗು ಹುಟ್ಟಿದ ನಾಲ್ಕಾರು ದಿನಕ್ಕೆಲ್ಲ ಅಬ್ಬರಿಸಿದ್ದ. ಹೀಗಾಗಿ ತನ್ನ ಅಪ್ಪನ ಮನೆ ಸೇರಿಕೊಂಡ ಆ ಹೆಂಗಸು ತನ್ನ ಮಗುವಿನ ತಂದೆಯನ್ನು ವುಚ್ಚೇದಿಸಿ, ಆರೇಳು ತಿಂಗಳ ನಂತರ ಜೆರಾಲ್ಡ್ ಫೋರ್ಡ್ ಎನ್ನುವನನ್ನು ಮದುವೆಯಾದಳು. ತನ್ನ ಹೊಸ ಗಂಡನ ಮೇಲಿನ ಪ್ರೀತಿಂದ, ನಂಬಿಕೆಯಿಂದ ತನ್ನ ಮೊದಲ ಮಗುವನ್ನೂ ಜೆರಾಲ್ಡ್ ಫೋರ್ಡ್ ಜೂನಿಯರ್ ಎಂದು ಕರೆಯಲಾರಂಭಿಸಿದಳು. ಆ ತಾಯಿ ಮತ್ತು ಮಲತಂದೆ ಆ ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ಅವನಿಗೆ 15 ವರ್ಷ ತುಂಬುವ ತನಕ ತನ್ನನ್ನು ಹುಟ್ಟಿಸಿದವನು ಬೇರೊಬ್ಬ ಎಂದೇ ಗೊತ್ತಿರಲಿಲ್ಲ.

ಕಾಲೇಜಿನಲ್ಲಿ ಓದುತ್ತಿದ್ದಾಗ ಫೋರ್ಡ್ ಒಳ್ಳೆಯ ಅಮೇರಿಕನ್ ಫುಟ್‌ಬಾಲ್ ಆಡುತ್ತಿದ್ದ. ನಂತರ ಯೇಲ್ ಲಾ ಸ್ಕೂಲ್‌ನಲ್ಲಿ ವಕೀಲಿಕೆ ಓದಲು ಆರಂಭಿಸಿದ. ಆಗ ಎರಡನೆ ವಿಶ್ವಯುದ್ದ ನಡೆಯುತ್ತಿತ್ತು. ಅಮೇರಿಕ ಅದರಲ್ಲಿ ಇನ್ನೂ ಭಾಗಿಯಾಗಿರಲಿಲ್ಲ. ಫೋರ್ಡ್ ತನ್ನ ಕೆಲವು ಸ್ನೇಹಿತರೊಡನೆ ಅಮೇರಿಕ ಯುದ್ದದಲ್ಲಿ ಭಾಗಿಯಾಗಬಾರದೆಂಬ ನಿವೇದನೆಯೊಂದಕ್ಕೆ ಸಹಿ ಹಾಕಿದ್ದ. ಆದರೆ ಯಾವಾಗ ಜಪಾನ್ ಅಮೇರಿಕಕ್ಕೆ ಸೇರಿದ ಹವಾಯಿ ದ್ವೀಪದ ಮುತ್ತಿನ ಬಂದರಿನ ಮೇಲೆ ದಾಳಿ ಮಾಡಿತೊ, ಅಮೇರಿಕದ ನೌಕಾದಳ ಸೇರಿಕೊಂಡ. ವಿಶ್ವಯುದ್ದದಲ್ಲಿ ಭಾಗಿಯಾಗಿ ತನ್ನ ಸೇವೆಗೆ ಅನೇಕ ಮೆಡಲ್‌ಗಳನ್ನು ಪಡೆದ.

ಯುದ್ದದಿಂದ ವಾಪಸ್ಸಾದ ಮೇಲೆ ಫೋರ್ಡ್ ರಾಷ್ಟ್ರೀಯ ಜನಪ್ರತಿನಿಧಿ ಸಭೆಗೆ ಸ್ಪರ್ಧಿಸಿದ. ಚುನಾವಣೆಯ ಸಮಯದಲ್ಲಿ, ತನ್ನನ್ನು ಆರಿಸಿದರೆ ನಿಮ್ಮ ಹೊಲಗಳಲ್ಲಿ ಬಂದು ದುಡಿಯುತ್ತೇನೆ ಮತ್ತು ನಿಮ್ಮ ಹಸುಗಳ ಹಾಲು ಕರೆಯುತ್ತೇನೆ ಎಂದು ತನ್ನ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿದ್ದ ರೈತರಿಗೆ ಆಶ್ವಾಸನೆ ಕೊಟ್ಟಿದ್ದ. ಗೆದ್ದ. ಎರಡು ವಾರಗಳ ಕಾಲ ರೈತರ ಮನೆಯಲ್ಲಿ ಹಾಲು ಕರೆದು ತನ್ನ ಮಾತು ಉಳಿಸಿಕೊಂಡ! 25 ವರ್ಷಗಳ ನಂತರ, ಅಮೇರಿಕದ ಇತಿಹಾಸದಲ್ಲಿ ಆಕಸ್ಮಿಕವೊಂದು ಸಂಭವಿಸುವ ತನಕ ಆ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ.

ಅದು 1973 ನೆ ಇಸವಿ. ನಿಕ್ಸನ್ ಆಗ ತಾನೆ ಎರಡನೆ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದರು. ಆದರೆ ಆ ಮರುಚುನಾವಣೆಯ ಸಮಯದಲ್ಲಿ ಅಲ್ಲಿಯತನಕ ಯಾವ ಅಮೇರಿಕನ್ ರಾಷ್ಟ್ರಾಧ್ಯಕ್ಷನೂ ಮಾಡದ ಅಪರಾಧವನ್ನು ನಿಕ್ಸನ್ ಎಸಗಿದ್ದರು. ಅವರದು ರಿಪಬ್ಲಿಕನ್ ಪಕ್ಷ. ಡೆಮೊಕ್ರಾಟ್ ಪಕ್ಷ ಅವರ ವಿರೋಧ ಪಕ್ಷ. ಡೆಮೊಕ್ರಾಟರ ಮುಖ್ಯಕಚೇರಿಯಿದ್ದದ್ದು ವಾಷಿಂಗ್‌ಟನ್ನಿನ ವಾಟರ್‌ಗೇಟ್ ಕಟ್ಟಡದಲ್ಲಿ. ಡೆಮೊಕ್ರಾಟರ ಕಚೇರಿಯಲ್ಲಿ ಅವರ ತಂತ್ರಗಳನ್ನು ತಿಳಿದುಕೊಳ್ಳಲು ಕೆಲವು ನಿಕ್ಸನ್ ನಿಕಟವರ್ತಿಗಳು ಕದ್ದಾಲಿಕೆ ಯಂತ್ರಗಳನ್ನು ಅಳವಡಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡರು. ಇದ್ಯಾವುದೂ ತನಗೆ ಗೊತ್ತಿಲ್ಲ, ಅದರಲ್ಲಿ ತನ್ನ ಪಾತ್ರವಿಲ್ಲ ಎಂದ ನಿಕ್ಸನ್, ಮರುಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆದ್ದರು. ಆದರೆ ವಾಟರ್‌ಗೇಟ್ ಹಗರಣದಲ್ಲಿ ನಿಕ್ಸನ್ ಪಾತ್ರವಿದೆ ಎಂದು ಒಂದೊಂದೆ ಬಯಲಾಗುತ್ತ ಬರುತ್ತಿತ್ತು. ಅದೇ ಸಮಯದಲ್ಲಿ ನಿಕ್ಸನ್‌ರ ಉಪಾಧ್ಯಕ್ಷನಾಗಿದ್ದ ಸ್ಪೈರೊ ಆಗ್ನ್ಯೂ ಲಂಚ ಮತ್ತು ತೆರಿಗೆಕಳ್ಳತನದ ತಪ್ಪಿಗೆ ಸಿಕ್ಕಿಹಾಕಿಕೊಂಡು ರಾಜಿನಾಮೆ ಕೊಡಬೇಕಾತು. ಆಗ ಎರಡೂ ಪಕ್ಷಗಳವರು ಉಪಾಧ್ಯಕ್ಶ ಸ್ಥಾನಕ್ಕೆ ನಿಕ್ಸನ್‌ಗೆ ಸೂಚಿಸಿದ ಹೆಸರು, ಜೆರಾಲ್ಡ್ ಫೋರ್ಡ್. ಅಂತಹದೊಂದು ಘಟನೆ ಅಮೇರಿಕದ ಇತಿಹಾಸದಲ್ಲಿ ನಡೆದದ್ದು ಅದೇ ಮೊದಲು.

ಮುಂದಿನ ಹತ್ತು ತಿಂಗಳಿಗೆಲ್ಲ ವಾಟರ್‌ಗೇಟ್ ಹಗರಣದಲ್ಲಿ ಅವರ ಪಾತ್ರ ಮತ್ತು ಅದನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸಿದ್ದೆಲ್ಲ ಬಯಲಾಗಿ ನಿಕ್ಸನ್ ರಾಜಿನಾಮೆ ನೀಡಬೇಕಾತು. ಸಂವಿಧಾನದ ಪ್ರಕಾರ ಉಪಾಧ್ಯಕ್ಷ ಫೋರ್ಡ್ ಅಮೇರಿಕದ 38 ನೆ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೂ ಸಹ ಅಮೇರಿಕದ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕ. ಯಾಕೆಂದರೆ ಯಾವುದೆ ರಾಷ್ಟ್ರೀಯ ಚುನಾವಣೆಗೆ, ಅಂದರೆ ಉಪಾಧ್ಯಕ್ಷ ಅಥವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನೇರವಾಗಿ ಜನರಿಂದ ಚುನಾಯಿತನಾಗದೆ ಫೋರ್ಡ್ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಎರಡೂ ಆಗಿಬಿಟ್ಟರು. ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅಮೇರಿಕನ್ ಜನರನ್ನುದ್ದೇಶಿಸಿ ಮಾತನಾಡಿದ ಫೋರ್ಡ್ ಆಗ ಹೇಳಿದ್ದು, "ನನ್ನ ಸಹನಾಗರಿಕರೆ, ನಮ್ಮ ಸುದೀರ್ಘ ರಾಷ್ಟ್ರೀಯ ದುಸ್ವಪ್ನ ಕೊನೆಯಾಗಿದೆ," ಎಂದು. ಹಾಗೆಂದು ಹೇಳಿದ ಫೋರ್ಡ್ ಕೆಲವು ತಿಂಗಳುಗಳ ನಂತರ ನಿಕ್ಸನ್‌ಗೆ ಕ್ಷಮಾದಾನ ನೀಡಿದರು. ಅಮೇರಿಕದ ಗಾಯವನ್ನು ವಾಸಿಮಾಡಲು ಪ್ರಯತ್ನಿಸಿದರು. ಆದರೆ ನಿಕ್ಸನ್‌ಗೆ ನೀಡಿದ ಕ್ಷಮಾದಾನವನ್ನು ಜನತೆ ಕ್ಷಮಿಸಲಿಲ್ಲ. ಎರಡೂವರೆ ವರ್ಷದ ನಂತರ ಬಂದ ಚುನಾವಣೆಯಲ್ಲಿ ಫೋರ್ಡ್‌ರನ್ನು ಸೋಲಿಸಿ ಜನ ಜಿಮ್ಮಿ ಕಾರ್ಟರ್‌ರನ್ನು ಗೆಲ್ಲಿಸಿದರು. ಫೋರ್ಡ್ ಕ್ಷಮಾದಾನ ನೀಡಲು ಮುಖ್ಯ ಕಾರಣ, ಪದೆಪದೆ ಆ ವಿಷಯವನ್ನು ಕೆದಕದೆ, ಅದಕ್ಕೆ ಪೂರ್ಣವಿಶ್ರಾಂತಿ ನೀಡಿದಂತಾಗುತ್ತದೆ, ತಾನು ಅಧ್ಯಕ್ಷನಾಗಿ ಸಾಮಾನ್ಯ ಜನತೆಗೆ ಮುಖ್ಯವಾದ ವಿಷಯಗಳತ್ತ ಗಮನ ಕೊಡಲು ಸಾಧ್ಯವಾಗುತ್ತದೆ, ಎಂದು. ಆಗ ಜನ ಅದನ್ನು ಒಪ್ಪದಿದ್ದರೂ ಈಗ ಅದನ್ನು ಬಹುಜನರು ಒಪ್ಪುತ್ತಾರೆ.

ಇದೇ ವಾರ, ಈಗ ಅಮೇರಿಕದ ಸರ್ಕಾರ ಪ್ರತಿಕ್ಷಣವೂ ಕನವರಿಸುವ 'ಇರಾಕ್' ದೇಶದ ಮಾಜಿ ರಾಷ್ಟ್ರಾಧ್ಯಕ್ಷನೂ ಸತ್ತ. ಆದರೆ ಅದು ಸಹಜ ಸಾವಾಗಿರಲಿಲ್ಲ. ಎರಡು ವರ್ಷದ ಹಿಂದಷ್ಟೆ ಆಸ್ತಿತ್ವಕ್ಕೆ ಬಂದ ಇರಾಕಿನ ಹೊಸ ಸಂವಿಧಾನ, ಸರ್ಕಾರ, ನ್ಯಾಯವ್ಯವಸ್ಥೆ, ಅಮೇರಿಕದ ಪ್ರಭಾವ, ಎಲ್ಲದರ ಪರಿಣಾಮವಾಗಿ, ಇರಾಕಿನ ವಿಶೇಷ ನ್ಯಾಯಾಲಯ ಸದ್ದಾಮ್ ಹುಸೇನ್‌ಗೆ ಗಲ್ಲು ಶಿಕ್ಷೆ ವಿಧಿಸಿತು. ಕಾರಣ? ಇರಾಕಿನ ಹಳ್ಳಿಯೊಂದರ 148 ಷಿಯಾ ಮುಸ್ಲಿಮರನ್ನು ಕಗ್ಗೊಲೆ ಮಾಡಲು ನೇರವಾಗಿ ಆದೇಶ ನೀಡಿದ ಎಂಬ ಆಪಾದನೆ ರುಜುವಾತಾದದ್ದು. ಆದರೆ, ತನ್ನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದವರನ್ನು ಯಮಸದನಕ್ಕೆ ಅಟ್ಟಲು ಹಾಗು ತನ್ನ ಮೇಲೆ ಎದ್ದ ದಂಗೆಗಳ ಹುಟ್ಟಡಗಿಸಲು ಸದ್ದಾಮ್ ಹುಸೇನರು ಕೊಂದದ್ದು ಕೇವಲ 148 ಜನ ಮಾತ್ರವಾಗಿರಲಿಲ್ಲ. ಬದಲಿಗೆ, ಇರಾಕಿನ ಲಕ್ಷಕ್ಕೂ ಮಿಗಿಲು ಖರ್ದಿಷ್ ಮತ್ತು ಷಿಯಾ ಮುಸ್ಲಿಮರನ್ನು. ಅಮೇರಿಕ ಇರಾಕಿನ ಮೇಲೆ ದಾಳಿ ಮಾಡಿದ್ದು ಸರಿಯೊ ತಪ್ಪೊ ಎನ್ನುವ ಪ್ರಶ್ನೆಯನ್ನು ಪಕ್ಕಕ್ಕಿಟ್ಟು ಯೋಚಿಸಿದರೆ ಸದ್ದಾಮರ ಹಿಂದಿನ ಪಾತಕಗಳಿಗೆ ಈಗ ಶಿಕ್ಷೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ ಸುಮ್ಮಸುಮ್ಮನೆ ಸಾವಿರಾರು ಜನ ಬಾಗ್ದಾದಿನ ಬೀದಿಗಳಲ್ಲಿ ಸದ್ದಾಮ್ ಸಾವನ್ನು ಸಂಭ್ರಮಿಸುತ್ತಿರಲಿಲ್ಲ. ಸದ್ದಾಮ್ ಕಾಲದಲ್ಲಿ ಇರಾಕಿನಲ್ಲಿ ಜನರಿಗೆ ಯಾವುದೆ ಮೂಲಭೂತ ಹಕ್ಕುಗಳಿರಲಿಲ್ಲ. ಇದ್ದಿದ್ದರೆ, ರಾಜದ್ರೋಹದ ಆಪಾದನೆಯ ಮೇಲೆ ಆ ಹಳ್ಳಿಯ ಜನರನ್ನು ಬಂಧಿಸಿ, ವಿಚಾರಣೆ ನಡೆಸಿ, ನಂತರ ಆಪಾದನೆ ರುಜುವಾತಾದರೆ ಗಲ್ಲಿಗೇರಿಸಬೇಕಿತ್ತೆ ಹೊರತು ನೇರವಾಗಿ ಅಧ್ಯಕ್ಷನೆ ಹೋಗಿ ಗುಂಡಿಟ್ಟು ಕೊಲ್ಲಿ ಎಂದು ಹೇಳುತ್ತಿರಲಿಲ್ಲ. ಪ್ರತಿ ವಿಷಯಕ್ಕೂ ಅಮೇರಿಕವನ್ನು ವಿರೋಧಿಸಬೇಕು ಎಂದುಕೊಳ್ಳುವವರು ಹಾಗು ಸದ್ದಾಮ್‌ರನ್ನು ಬೆಂಬಲಿಸಿದರೆ ಮುಸ್ಮಿಮರನ್ನು ಬೆಂಬಲಿಸಿದಂತೆ ಎಂದುಕೊಳ್ಳುವವರು ಈ ವಿಷಯವನ್ನು ಗಮನಿಸಬೇಕು. ಮೂಲಭೂತವಾದಿಗಳನ್ನು, ಸರ್ವಾಧಿಕಾರಿಗಳನ್ನು ಬೆಂಬಲಿಸಿದರೆ ಸಾಮಾನ್ಯ ಬಹುಸಂಖ್ಯಾತ ಮುಸ್ಲಿಮರನ್ನು ಬೆಂಬಲಿಸಿದಂತಾಗುವುದಿಲ್ಲ.
ಇಲ್ಲಿ, ನಿಕ್ಸನ್ ಮತ್ತು ಸದ್ದಾಮ್ ನಮ್ಮ ರಾಜಕಾರಣಿಗಳಿಗೂ ಒಂದು ಪಾಠ. ಅಧಿಕಾರವನ್ನು ಗಳಿಸಬೇಕೆಂಬ ಹಪಹಪಿಯಲ್ಲಿ, ಉಳಿಸಿಕೊಳ್ಳಬೇಕೆಂಬ ಹುಚ್ಚಿನಲ್ಲಿ ನಾವು ಮಾಡುವ ಅನ್ಯಾಯ, ಅಕ್ರಮಗಳನ್ನು ಯಾರೂ ಗಮನಿಸುವುದಿಲ್ಲ, ಎಂದಿಗೂ ಅದು ನಮ್ಮ ತಲೆಗೆ ಸುತ್ತಿಕೊಳ್ಳುವುದಿಲ್ಲ ಎಂದು ಯಾರೂ ಭಾವಿಸಬಾರದು. ಕಾಲ ಬದಲಾಗುತ್ತ ಇರುತ್ತದೆ. ಕಾನೂನು ಬದಲಾಗುತ್ತ ಇರುತ್ತದೆ. ಹೊಸಬರು ಬರುತ್ತಿರುತ್ತಾರೆ. ಹಳೆ ಪ್ರಕರಣಗಳನ್ನು ಯಾರೊ ಎಲ್ಲಿಯೊ ಧೂಳು ಹೊಡೆದು ಮೇಜಿನ ಮೇಲೆ ಇಡುತ್ತಾರೆ. ನಿಕ್ಸನ್, ಸದ್ದಾಮ್, ನರಸಿಂಹರಾವ್, ಶಿಬು ಸೊರೇನ್, ನವಜೋತ್ ಸಿದ್ಧು, ಜಯಲಲಿತ, ಇತ್ಯಾದಿಗಳು ಜೈಲು ಪಾಲಾಗುತ್ತಿರುತ್ತಾರೆ, ಇಲ್ಲವೆ ನೇಣಿಗೇರುತ್ತಿರುತ್ತಾರೆ, ಇಲ್ಲವೆ ಅವಮಾನದಲ್ಲಿ ಕೊಳೆಯುತ್ತ ಸಾಯುತ್ತಾರೆ. ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅಪರಾಧ ದೊಡ್ಡದಿದ್ದರಂತೂ ಇನ್ನೂ ಕಷ್ಟ. ಇದು ಬುಷ್ ವಿಚಾರಕ್ಕೂ ನಿಜವಾಗಬಹುದು, ನಮ್ಮ ಅಧಿಕಾರಸ್ಥರಿಗೂ ನಿಜವಾಗಬಹುದು. ಬೀಸುವ ದೊಣ್ಣೆಯನ್ನು ಒಂದು ಸಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಪ್ರತಿಸಾರಿಯೂ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುವುದು ಮೂರ್ಖತನ!

Dec 24, 2006

ಅಣ್ವಸ್ತ್ರ ಒಪ್ಪಂದಕ್ಕೆ ವಿರೋಧವೇಕೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 5, 2007 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಬ್ಬರು ಬದ್ಧ ವಿರೋಧಿಗಳು ಒಂದು ವಿಷಯದ ಮೇಲೆ ಸಹಮತ ವ್ಯಕ್ತಪಡಿಸುವುದು ಬಹಳ ಅಪರೂಪ. ಅಮೇರಿಕದ ಸೆನೆಟ್ ಭಾರತದೊಂದಿಗಿನ ಹೊಸ ಅಣ್ವಸ್ತ್ರ ಒಪ್ಪಂದಕ್ಕೆ ಅನುಮೋದನೆ ನೀಡಿ, ಜಾರ್ಜ್ ಬುಷ್ ಅದಕ್ಕೆ ಸಹಿ ಹಾಕಿದ ನಂತರ ಭಾರತದಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಪಕ್ಷಗಳು ಹಾಗು ಬಲಪಂಥೀಯ ಬಿಜೆಪಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದವು. ಇಂತಹುದು ಅಪರೂಪವಾದರೂ ಇದರಲ್ಲಿ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿರುವ ಎಡಪಂಥೀಯರಿಗೆ ಅಮೇರಿಕವನ್ನು ವಿರೋಧಿಸುವುದೆ ಮುಖ್ಯ ಅಜೆಂಡ. ಕಾಳಜಿಯಿಂದ, ಭಾವೋನ್ಮಾದತೆಯಿಂದ, ಸಭೆ ಒಪ್ಪಿಕೊಳ್ಳುವಂತೆ ಮಾತನಾಡಲು ಕಮ್ಯುನಿಸ್ಟರಿಗೆ ಅಮೇರಿಕ ಮತ್ತು ಕಾರ್ಮಿಕರು ಬೇಕೆ ಬೇಕು. ಇನ್ನು ಅಮೇರಿಕದ ಅನೇಕ ವಿಚಾರಧಾರೆಗಳನ್ನು ಒಪ್ಪಿಕೊಳ್ಳುವ ಭಾಜಪ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ. ಸರ್ಕಾರ ಮಾಡುವ ಪ್ರತಿಯೊಂದನ್ನೂ ಏನೋ ತಪ್ಪು ಹುಡುಕಿ ಟೀಕಿಸುವುದು ಅವರಿಗೆ ಆಸ್ತಿತ್ವದ ಪ್ರಶ್ನೆ. ಉತ್ತರ ಪ್ರದೇಶದ ಚುನಾವಣೆ ಹತ್ತಿರ ಬಂದಿರುವ ಈ ಸಮಯದಲ್ಲಿ ದೇಶಕ್ಕೆ ಹಾನಿ ಎಂದು ತಿರುಚಿಯೊ ಪರಚಿಯೊ ಹೇಳಬಹುದಾದ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಭಾರತ ಮೊಟ್ಟ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಸೆಪ್ಟೆಂಬರ್ 7, 1972 ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರದ ನೇತೃತ್ವದಲ್ಲಿ. ಇದಾದ ನಂತರ ಮತ್ತೊಂದು ಪರೀಕ್ಷೆ ನಡೆಸಲು ಸಾಧ್ಯವಾಗಿದ್ದು 26 ವರ್ಷಗಳ ನಂತರವೆ, 1998 ರಲ್ಲಿ. ಈ 26 ವರ್ಷಗಳ ನಡುviನ ಅವಧಿಯಲ್ಲಿ ಮತ್ತೊಂದು ಅಣು ಪರೀಕ್ಷೆ ನಡೆಸಲು ಭಾರತ ರಹಸ್ಯವಾಗಿ ಪ್ರಯತ್ನಿಸುತ್ತಲೆ ಇತ್ತು. 1982, 1995, ಹಾಗೂ 1997 ರಲ್ಲಿ ಪರೀಕ್ಷೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಮೇರಿಕದ CIA ಗೆ ಅದು ಉಪಗ್ರಹಗಳ ಮೂಲಕ ಗೊತ್ತಾಗಿ ಭಾರತ ಆ ಸಾಹಸಕ್ಕೆ ಕೈ ಹಾಕದಂತೆ ಪ್ರತಿಬಾರಿಯೂ ಅಮೇರಿಕ ತಡೆದಿತ್ತು.

ಹಿಂದಿನ ಈ ಎಲ್ಲಾ ಒತ್ತಡಗಳನ್ನು ತಿಳಿದಿದ್ದ ಭಾರತೀಯ ಸೇನೆ, ಭಾಭಾ ಅಣು ಸಂಶೋಧನಾ ಕೇಂದ್ರ ಮತ್ತು DRDO ದ ವಿಜ್ಞಾನಿಗಳು, ಅಮೇರಿಕದ ಹದ್ದಿನ ಕಣ್ಣನ್ನು ತಪ್ಪಿಸಿ ಪರೀಕ್ಷೆ ನಡೆಸುವ ಯೋಜನೆಯೊಂದಿಗೆ 1998 ರಲ್ಲಿ ಸಿದ್ದವಾದರು. ಆಗ ಇದ್ದದ್ದು ವಾಜಪೇಯವರ ಸರ್ಕಾರ. ಈ ಬಾರಿ ಎಲ್ಲ ರೀತಿಯಿಂದಲೂ ಅಮೇರಿಕದ ಗೂಢಾಚಾರಿ ಕಣ್ಣುಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾಗಿ ಯಾವುದೇ ಸುಳಿವು ನೀಡದಂತೆ ಮೇ 11, 1998 ರಂದು ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟರು. ಎರಡು ದಿನದ ನಂತರ, ಅಂದರೆ ಮೇ 13 ರಂದು ಮತ್ತೊಮ್ಮೆಯೂ ಭೂಮಿಯ ಒಳಗೆ ಅಣು ಬಾಂಬ್ ಸಿಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯತೆಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದ ಭಾಜಪದವರು ಇದು ತಮ್ಮದೇ ಸಾಧನೆ ಎಂದು ಸಾರಿಕೊಂಡರು. ಆದರೆ ಇದು ಒಂದು ಪಕ್ಷದ ಸರ್ಕಾರ ಮಾಡಿದ್ದು ಎನ್ನುವುದಕ್ಕಿಂತ ಭಾರತದ ಸರ್ಕಾರ ವರ್ಷಾನುಗಟ್ಟಲೆ ಚಾಲ್ತಿಯಲ್ಲಿಟ್ಟಿದ್ದ ಯೋಜನೆ ಇದಾಗಿದ್ದು, ಅದು ಯಶಸ್ವಿಯಾಗಿದ್ದು ಮಾತ್ರ 1998 ರಲ್ಲಿ ಎನ್ನುವುದಷ್ಟೆ ನಿಜ. ಇದನ್ನೆಲ್ಲ ಇಂಡಿಯಾ ಟುಡೆ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾದ ರಾಜ್ ಚೆಂಗಪ್ಪ "WEAPONS OF PEACE" ಎಂಬ ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅಂದ ಹಾಗೆ, 1998 ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ DRDO ದ ಮುಖ್ಯಸ್ಥರಾಗಿದ್ದವರು ಹಾಗು ಆ ಪರೀಕ್ಷೆಯ ಸಮಯದಲ್ಲಿ ಉಸ್ತುವಾರಿ ಮಾಡುವಾಗ ಮಿಲಿಟರಿ ಸಮವಸ್ತ್ರ ಧರಿಸಿ ಪೋಖ್ರಾನ್ ಸಂದರ್ಶಿಸುತ್ತಿದ್ದವರು ಈಗಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಮ್‌ರು.

ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ 15 ದಿನಕ್ಕೆಲ್ಲ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಎರಡೂ ದೇಶಗಳ ಮೇಲೆ ಪಾಶ್ಚಾತ್ಯ ದೇಶಗಳು ಅನೇಕ ರೀತಿಯ ದಿಗ್ಬಂಧನಗಳನ್ನು ಹೇರಿದವು. ಅಣು ಸಂಬಂಧಿ ಸಂಶೋಧನೆ ಹೊರತು ಪಡಿಸಿ ಮಿಕ್ಕವುಗಳ ಮೇಲೆ ಈ ದಿಗ್ಬಂಧನಗಳು ಭಾರತದ ಮೇಲೆ ಮತ್ಯಾವ ದೊಡ್ಡ ಪರಿಣಾಮಗಳನ್ನೂ ಬೀರಲಿಲ್ಲ. ಅದಕ್ಕೆ ಕಾರಣ ಭಾರತದಲ್ಲಿ ಅಷ್ಟೊತ್ತಿಗೆ ಬೆಳವಣಿಗೆಯಲ್ಲಿದ್ದ ಉದಾರೀಕರಣ ಮತ್ತು ಆರ್ಥಿಕ ಅಭಿವೃದ್ಧಿ. ಭಾರತದಿಂದ ಲಾಭ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಹುರಾಷ್ಟ್ರೀಯ ಕಂಪನಿಗಳು ಕಳೆದುಕೊಳ್ಳಲು ಇಷ್ಟ ಪಡದ ಕಾರಣದಿಂದ ಭಾರತಕ್ಕೂ ಲಾಭವಾಯಿತು. ಸಾಫ್ಟ್‌ವೇರ್, ಷೇರು ಮಾರುಕಟ್ಟೆ, ಮೂಲಭೂತ ಸೌಕರ್ಯ ಇಲ್ಲೆಲ್ಲ ವಿದೇಶಿ ಕಂಪನಿಗಳು ತೊಡಗಿಕೊಂಡವು. ಅಮೇರಿಕ ಒಂದೊಂದೆ ದಿಗ್ಬಂಧನವನ್ನು ತೆಗೆಯುತ್ತ ಬಂತು. ಆದರೆ ಅಣು ಸಂಶೋಧನೆಗೆ ಸಂಬಂಧಿಸಿದಂತೆ ತನ್ನ ನಿಲುವುಗಳನ್ನು ಸಡಿಲಿಸಲಿಲ್ಲ. ಹಾಗಾಗಿ ಆ ವಿಷಯದಲ್ಲಿ ಭಾರತಕ್ಕೆ ಅಪಾರ ಹಿನ್ನಡೆ, ನಷ್ಟವಾಗಿದ್ದು ನಿಜ. ಯಾಕೆಂದರೆ, ಅಣು ಸಂಶೋಧನೆಂದ ಕೇವಲ ಮಿಲಿಟರಿ ಅಸ್ತ್ರಗಳನ್ನು ಮಾತ್ರ ತಯಾರಿಸಲಾಗುವುದಿಲ್ಲ. ಬದಲಿಗೆ ಅದನ್ನು ವಿದ್ಯುತ್ ಉತ್ಪಾದನೆಯಂತಹ ಜನಸಾಮಾನ್ಯರ ಉಪಯೋಗಕ್ಕೂ ಬಳಸಬಹುದು. ಇದಕ್ಕೆಲ್ಲ ಬೇಕಾದಷ್ಟು ತಂತ್ರಜ್ಞಾನವಾಗಲಿ, ಬೃಹತ್ ಯಂತ್ರಗಳಾಗಲಿ, ಯುರೇನಿಯಮ್‌ನಂತಹ ಕಚ್ಚಾವಸ್ತುವಾಗಲಿ ಭಾರತದ ಬಳಿ ಇರಲಿಲ್ಲ. ದಿಗ್ಬಂಧನದ ಕಾರಣದಿಂದ ಇದನ್ನು ಅಂತರ್ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿಯೂ ಕೊಳ್ಳುವ ಹಾಗಿರಲಿಲ್ಲ. ಹೀಗಾಗಿ ಈ ದಿಗ್ಬಂಧನವನ್ನು ಕನಿಷ್ಠ ಸಿವಿಲ್ ಉದ್ದೇಶಗಳಿಗಾದರೂ ತೆರವು ಗೊಳಿಸುವುದು ಭಾರತಕ್ಕೆ ಅತ್ಯವಶ್ಯವಾಗಿತ್ತು.

ಈ ಮಧ್ಯೆ ಅಮೇರಿಕಕ್ಕೂ ಇದನ್ನು ತೆರವು ಮಾಡದೆ ವಿಧಿ ಇರಲಿಲ್ಲ. ಭಾರತ ಮತ್ತು ಚೀನಾದ ಆರ್ಥಿಕತೆ ಬೆಳೆಯುತ್ತಿರುವಂತೆ ಈ ದೇಶಗಳ ತೈಲ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಅದು ತೈಲದ ಬೆಲೆ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಅಮೇರಿಕ ಮಧ್ಯಪ್ರಾಚ್ಯದ ಮುಸ್ಲಿಮ್ ರಾಷ್ಟ್ರಗಳ ಮೇಲಿನ ಅವಲಂಬನೆಯೂ ಹೆಚ್ಚಾಗುವಂತೆ ಮಾಡುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದಕತೆ ಮತ್ತು ಮುಸ್ಲಿಮ್ ಉಗ್ರವಾದವನ್ನು ಕಮ್ಮಿ ಮಾಡಿ, ಅಲ್ಲಿ ನಿಧಾನವಾಗಿ ಪ್ರಜಾಪ್ರಭುತ್ವವನ್ನು ಪೋಷಿಸಬೇಕೆಂಬ ಅಮೇರಿಕದ ದೂರಾಲೋಚನೆಗೂ ಇದು ಅಡ್ಡಗಾಲು ಹಾಕುತ್ತಿದೆ. ಇರಾನ್‌ನಂತಹ ಮೂಲಭೂತವಾದಿ ರಾಷ್ಟ್ರವನ್ನು ಸಹ ಎದುರು ಹಾಕಿಕೊಳ್ಳುವ ಕಂಫರ್ಟಬಲ್ ಸ್ಥಿತಿಯಲ್ಲಿ ಅಮೇರಿಕ ಇಲ್ಲ. ಹೀಗಾಗಿ, ಭಾರತದ ತೈಲದ ಮೇಲಿನ ಅವಲಂಬನೆ ಕಮ್ಮಿಯಾಗಿ, ಅದು ಅಣು ವಿಜ್ಞಾನವನ್ನು ಶಕ್ತಿಮೂಲಕ್ಕೆ ಬಳಸಿಕೊಳ್ಳುವುದಾದರೆ ಅದು ಅಮೇರಿಕಕ್ಕೂ ಅಪೇಕ್ಷಣೀಯ. ಅದರ ಜೊತೆಗೆ ಭಾರತಕ್ಕೆ ಬೇಕಾದ ಯುರೇನಿಯಮ್ ಮಾರಾಟದಿಂದ, ಯಂತ್ರ ಮತ್ತು ತಂತ್ರಜ್ಞಾನದ ಮಾರಾಟದಿಂದ ಅಮೇರಿಕದ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಶತಕೋಟಿಗಟ್ಟಲೆ ಡಾಲರ್‌ಗಳ ವ್ಯಾಪಾರ ಆಗಿಯೇ ತೀರುತ್ತದೆ. ಅದರಿಂದ ಅಮೇರಿಕದ ಆರ್ಥಿಕ ಬೆಳವಣಿಗೆಗೂ ಲಾಭ. ಅವರಿಗೆ ಈ ಒಪ್ಪಂದದಿಂದ ಕಳೆದುಕೊಳ್ಳುವುದು ಏನೂ ಇಲ್ಲ.

ಇನ್ನು ನಮಗೆ: ನಮಗೂ ಕಳೆದುಕೊಳ್ಳುವುದು ಏನೂ ಇಲ್ಲ ಎಂದೇ ಹೇಳಬೇಕು. ಈ ಒಪ್ಪಂದದ ಪ್ರಕಾರ ಸಿವಿಲ್ ಉದ್ದೇಶದ ಅಣುಕೇಂದ್ರಗಳನ್ನಷ್ಟೆ ಅಮೇರಿಕ ಸರ್ಕಾರ ಪರಿಶೀಲಿಸಲು ಸಾಧ್ಯ. ಪರಿಶೀಲನಾ ಪಟ್ಟಿಯಲ್ಲಿ ಭಾರತದ ಮಿಲಿಟರಿ ಪ್ಲಾಂಟ್‌ಗಳು ಸೇರಿಲ್ಲ. ಆ ಸಾರ್ವಭೌಮತೆಯನ್ನು ಸರ್ಕಾರ ಉಳಿಸಿಕೊಂಡಿದೆ. ಇನ್ನು, ನಾವು ಅಣು ಬಾಂಬ್ ಹೊಂದಿದ ಮಾತ್ರಕ್ಕೆ ಯಾರನ್ನು ಬೇಕಾದರೂ ಹೆದರಿಸಬಹುದು ಎನ್ನುವುದು ಬಾಲಿಶ ಚಿಂತನೆ. ಈ ಹೊಸ ಯುಗದಲ್ಲಿ ಒಂದು ಬಲಿಷ್ಠ ದೇಶ ಇನ್ನೊಂದು ದೇಶದ ಅಧಿಕಾರಸ್ಥರನ್ನು ಕೆಳಗಿಳಿಸಬಹುದೆ ಹೊರತು ಇಡೀ ದೇಶವನ್ನು ಅಲ್ಲಿನ ಜನರಿಗೆ ವಿರೋಧವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಭಾರತ ಈಗ ಮಾಡಬೇಕಿರುವುದು ಎಲ್ಲಾ ರೀತಿಂದಲೂ ತಾನು ಸ್ವಾವಲಂಬನೆ ಸಾಧಿಸುವುದು, ಜನರ ಜೀವನ ಮಟ್ಟ ಸುಧಾರಿಸಿ ಅವರಲ್ಲಿ ಇನ್ನೊಂದು ದೇಶಕ್ಕೆ ತಲೆಬಾಗದ ರಾಷ್ಟ್ರೀಯತೆ ಬೆಳೆಸುವುದು, ಹಾಗೂ ಕನಿಷ್ಠ ಕೆಲವಾದರೂ ದೇಶಗಳು ಆರ್ಥಿಕವಾಗಿ ತನ್ನ ಮೇಲೆ ಅವಲಂಬನೆ ಬೆಳೆಸಿಕೊಳ್ಳುವಂತೆ ಮಾಡುವುದು. ಆಗ ನಮ್ಮ ಯುದ್ಧವನ್ನು ಅವರೇ ಮಾಡುತ್ತಾರೆ. ಅಮೇರಿಕದ ಯುದ್ಧವನ್ನು ಇಂಗ್ಲೆಂಡ್, ಆಸ್ಟ್ರೇಲಿಯ, ಇಟಲಿ, ಕೆನಡ, ಮತ್ತಿತರ ನ್ಯಾಟೋ ರಾಷ್ಟ್ರಗಳು ಮಾಡುವಂತೆ!

ಅಂದ ಹಾಗೆ: ಇಂತಹ ರಾಷ್ಟ್ರೀಯ ವಿಷಯಗಳನ್ನೆಲ್ಲ ಗಂಭೀರವಾಗಿ ಚರ್ಚಿಸಬಲ್ಲಂತಹ ಒಬ್ಬರೇ ಒಬ್ಬ ಎಂ.ಪಿ.ಯನ್ನಾದರೂ ನಾವು ಕರ್ನಾಟಕದಿಂದ ಆರಿಸಿದ್ದೇವಾ? ಸಂದೇಹ! ಇಲ್ಲದಿದ್ದರೆ, What a shame!

Dec 16, 2006

ಸಾಹಿತ್ಯ ಗೋಷ್ಠಿ ಮತ್ತು ಮರ್ಕ್ಯುರಿ ನ್ಯೂಸ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001 ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಕನ್ನಡ ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು 'ಸಾಹಿತ್ಯ ಗೋಷ್ಠಿ'. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ದಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗ್ಠೋಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಣಿಯವರ ಪ್ರಸಿದ್ಧ ಕಥಾಸಂಕಲನವಾದ 'ಅಮೃತಬಳ್ಳಿ ಕಷಾಯ'ವನ್ನು ಇಂಗ್ಲಿಷಿಗೆ ಭಾಷಾಂತರಿಸಿ "Dots and Lines" ಹೆಸರಿನಲ್ಲಿ ಪ್ರಕಟಿಸಿರುವುದು.

ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆತು. ಎರಡು ಉಪನ್ಯಾಸಗಳ ನಡುವಿನ ತಿಂಡಿತೀರ್ಥದ ಬಿಡುವಿನ ಸಮಯದಲ್ಲಿ ವ್ಯಂಗ್ಯಚಿತ್ರಕಾರ ಸ್ನೇಹಿತರಾದ ಜನಾರ್ಧನ ಸ್ವಾಮಿಯವರೊಡನೆ ಮಾತನಾಡುತ್ತ ಒಂದು ಮೂಲೆಯಲ್ಲಿ ನಿಂತಿದ್ದೆ. ಆಗ ಇನ್ನೊಂದು ಮೂಲೆಯಲ್ಲಿದ್ದ ನಮ್ಮ ಪತ್ರಿಕೆಯ ಹಿತೈಷಿಗಳೂ, ಹಿರಿಯ ಸ್ನೇಹಿತರೂ ಆದ ಕಾತ್ಯಾಯಿನಿ ಸತ್ಯರವವರು ನನ್ನನ್ನು ನೋಡಿ ಏನನ್ನೊ ಜ್ಞಾಪಿಸಿಕೊಂಡವರಂತೆ ಹತ್ತಿರ ಬಂದರು. ಬಂದದ್ದೆ, "ರವಿ, ಈವತ್ತಿನ ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪೇಪರ್ ನೋಡಿದೆಯೇನಪ್ಪ?" ಎಂದರು. ನಾನು ನೋಡಿರಲಿಲ್ಲ. "ಹಾಗಿದ್ದರೆ ತಕ್ಷಣ ಹೋಗಿ ನೋಡು," ಎಂದರು. ನನಗೆ ಕುತೂಹಲವಾತು. ಸ್ವಾಮಿಯವರು, "ಹೌದು, ಫ್ರಂಟ್‌ಪೇಜ್‌ನಲ್ಲಿಯೆ ಎಷ್ಟು ದೊಡ್ಡದಾಗಿ ಬಂದಿದೆ ಅಲ್ಲವಾ?" ಎಂದು, ಏನು ಬಂದಿದೆ ಎಂದು ವಿವರಿಸ ಹೊರಟರು. ತಕ್ಷಣ ಕಾತ್ಯಾನಿಯವರು, "ಹೇಳಬೇಡಿ, ರವೀನೆ ಹೋಗಿ ನೋಡಲಿ. ನೀನು ಇಂತಹ ವಿಷಯಗಳನ್ನೆಲ್ಲ ಫಾಲ್ಲೊ ಮಾಡ್ತಿರ್ತೀಯ ಅಂತಲೆ ನಿನಗೆ ಹೇಳೋಣ ಅಂತ ಬಂದೆ. ಮುಂದಿನ ನಾಲ್ಕು ದಿನವೂ ಆ ಪತ್ರಿಕೆಯನ್ನು ತಗೊಳ್ಳೋದು ಮರೀಬೇಡಪ್ಪ," ಎಂದರು. ಅಷ್ಟಾದರೂ ಕಾತ್ಯಾಯಿನಿ ಮತ್ತು ಸ್ವಾಮಿಯವರ ಮಾತಿನ ನಡುವೆ ಅದು ಭಾರತಕ್ಕೆ ಸಂಬಂಧಿಸಿದ ವಿಷಯ, ಮರ್ಕ್ಯುರಿ ನ್ಯೂಸ್‌ನಂತಹ ಪ್ರಸಿದ್ಧ ಪತ್ರಿಕೆ ಭಾರತದ ಬಗ್ಗೆ ಎಷ್ಟೊಂದು ದೊಡ್ಡ ಫ್ಯೂಚರ್ ಮಾಡಿದೆ ಎಂಬ ಹೆಮ್ಮೆ ಇಣುಕಾಡುತ್ತಿದ್ದದ್ದು ಗೊತ್ತಾಯಿತು. ಮುಂದಿನ ನಾಲ್ಕು ದಿನವೂ ನಾನು ತಪ್ಪದೆ ಆ ಪತ್ರಿಕೆ ಕೊಂಡುಕೊಂಡೆ.

ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪತ್ರಿಕೆಯ ಪ್ರತಿದಿನದ ಪ್ರಸಾರ ಸುಮಾರು ಎರಡೂ ಮುಕ್ಕಾಲು ಲಕ್ಷ. ಹೆಸರೆ ಹೇಳುವಂತೆ ಇದು ರಾಷ್ಟ್ರೀಯ ಪತ್ರಿಕೆಯೇನಲ್ಲ. ಸ್ಯಾನ್ ಫ್ರಾನ್ಸಿಸ್ಕೊ ಬೇ ವಲಯದ ದಕ್ಷಿಣ ಭಾಗವಾದ ಸಿಲಿಕಾನ್ ಕಣಿವೆಯಲ್ಲಿ ಮಾತ್ರ ಇದರ ಪ್ರಸಾರ. ಆದರೆ ಸಿಲಿಕಾನ್ ಕಣಿವೆಯಲ್ಲಂತೂ ಇದೇ ನಂಬರ್ 1 ಹಾಗೂ ಪ್ರಭಾವಶಾಲಿ ಕೂಡ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಲ್ಲಿನ ಭಾರತೀಯರ ಸಾಂದ್ರತೆ ಅಮೇರಿಕದಲ್ಲಿನ ಬೇರೆಲ್ಲ ಭಾಗಗಳಿಗಿಂತ ಹೆಚ್ಚಾಗಿರುವುದರಿಂದ, ಸ್ಥಳೀಯ ಭಾರತೀಯರಲ್ಲೂ ಮರ್ಕ್ಯುರಿ ನ್ಯೂಸ್ ಜನಪ್ರಿಯ. ಸ್ಥಳೀಯ ಭಾರತೀಯ ಲೇಖಕರೂ ಈ ಪತ್ರಿಕೆಗೆ ನಾನಾ ವಿಷಯಗಳ ಬಗ್ಗೆ ಬರೆಯುತ್ತಿರುತ್ತಾರೆ. ಈ ಪತ್ರಿಕೆಗೆ ಇಲ್ಲಿಯವರೆಗೆ ಎರಡು ಸಲ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ದೊರಕಿದೆ.

ಅಮೇರಿಕದಲ್ಲಿನ ಪತ್ರಿಕೆ-ರೇಡಿಯೊ-ಟಿವಿಗಳನ್ನು ಗಮನಿಸುವ ಭಾರತೀಯರಿಗೆ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಸುದ್ದಿಮಾಧ್ಯಮಗಳಲ್ಲಿ ಭಾರತದ ಕುರಿತಾದ ವಿಷಯಗಳಿಗೆ ದೊರಕುತ್ತಿರುವ ಪ್ರಾಮುಖ್ಯ ಎದ್ದು ಕಾಣಿಸದೆ ಇರದು. ಅದಕ್ಕೂ ಮೊದಲು ಕೇವಲ ಪ್ರಕೃತಿ ವಿಕೋಪಗಳಂತಹ ವಿಷಯಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದ ಭಾರತ ಈ ನಡುವೆ ಅಮೇರಿಕನ್ನರು ವಿಶೇಷ ಆಸಕ್ತಿ ತೋರಿಸುವ ಆರ್ಥಿಕ, ವಾಣಿಜ್ಯ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಇಲ್ಲಿನವರಿಗಿಂತ ಕಮ್ಮಿ ಸಂಬಳಕ್ಕೆ ಕೊರತೆಲ್ಲದಂತೆ ಸಿಗುವ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞರು, ಔಟ್‌ಸೋರ್ಸ್ ಮಾಡಿದರೆ ಪ್ರತಿವರ್ಷ ಉಳಿತಾಯವಾಗುವ ಕೋಟ್ಯಾಂತರ ಡಾಲರ್‌ಗಳು, ಭಾರತದಲ್ಲಿ ಕೊಳ್ಳುವ ತಾಕತ್ತಿರುವ ಕೋಟ್ಯಾಂತರ ಜನಸಂಖ್ಯೆಯ ಮಧ್ಯಮವರ್ಗದವರ ಮಾರುಕಟ್ಟೆ, ಶರವೇಗದಲ್ಲಿ ಏರುತ್ತಿರುವ ಶೇರು ಮಾರುಕಟ್ಟೆ, ಇವೆಲ್ಲವೂ ಅಮೇರಿಕದ ಬ್ಯುಸಿನೆಸ್ ಪ್ರಪಂಚಕ್ಕೆ ಪ್ರೀತಿಪಾತ್ರವಾದವು! ಈ ಹಿನ್ನೆಲೆಯಲ್ಲಿ ಪತ್ರಕರ್ತ ಜಾನ್ ಬೌಡ್ರ್ಯು ಡಿಸೆಂಬರ್ 3 ರಿಂದ 6 ರ ವರೆಗೆ India 2.0 ಎಂಬ ಅಗ್ರ ಲೇಖನಮಾಲೆಯಲ್ಲಿ ಭಾರತದಲ್ಲಿ ಆಗುತ್ತಿರುವ ಆರ್ಥಿಕಾಭಿವೃದ್ಧಿ, ಬದಲಾಗುತ್ತಿರುವ ಜೀವನಶೈಲಿ, ಹೆಚ್ಚಾಗುತ್ತಿರುವ ಉದ್ಯಮಶೀಲತೆ, ನವಶ್ರೀಮಂತರು ಸಮಾಜಸೇವೆಯಲ್ಲಿ ತೊಡಗಿಸುತ್ತಿರುವ ಹಣ ಮತ್ತು ಸಮಯ, ಮುಂತಾದ ವಿಷಯಗಳ ಬಗ್ಗೆ ಭಾರತವನ್ನು ಸಂದರ್ಶಿಸಿ, ಒಳ್ಳೆಯ ಸಂಶೋಧನೆ ಮಾಡಿ, ಸಾಕಷ್ಟು ವಸ್ತುನಿಷ್ಠವಾಗಿಯೆ ಬರೆದಿದ್ದಾರೆ.

ಇಲ್ಲಿನ ಮಾಧ್ಯಮಗಳಲ್ಲಿ ಭಾರತದ ಬಗೆಗಿನ ಈ ಪರಿಯ ಆಸಕ್ತಿಯನ್ನು, ಸಂಶೋಧನೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಹಾಲಿವುಡ್‌ನಿಂದ ಹಿಡಿದು ಸೌರವಿಜ್ಞಾನದವರೆಗೂ ವಿಶ್ವದಾದ್ಯಂತದ ಉದ್ಯಮಶೀಲ ವಣಿಕರು ಭಾರತದತ್ತ ಮುಖ ಮಾಡುತ್ತಾರೆ ಎಂದರೆ, ಅದೇನೂ ಜ್ಯೋತಿಷ್ಯ ಹೇಳಿದಂತಾಗುವುದಿಲ್ಲ!



ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಮಾಡುವ ದೈತ್ಯ ಬಹುರಾಷ್ಟ್ರೀಯ ಕಂಪನಿ ಹ್ಯೂಲೆಟ್-ಪ್ಯಾಕರ್ಡ್ ಪ್ರಾರಂಭವಾಗಿದ್ದು ಗ್ಯಾರೇಜಿನಲ್ಲಿ. ಗೂಗ್ಲ್ ಕಂಪನಿ ಸಹ ಪ್ರಾರಂಭವಾಗಿದ್ದು ಹೀಗೆಯೆ. ಇವತ್ತು ಎಚ್.ಪಿ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 5000 ಶತಕೋಟಿ ರೂಪಾಯಿಗಳು! ಪ್ರಾರಂಭವಾಗಿ ಕೇವಲ 8 ವರ್ಷವಾಗಿರುವ ಗೂಗ್ಲ್‌ನ ಮಾರುಕಟ್ಟೆ ಮೌಲ್ಯ ಸುಮಾರು 6600 ಶತಕೋಟಿ ರೂಪಾಯಿಗಳು. ಹಾಗಾಗಿಯೆ, ಸಣ್ಣ ಮೊತ್ತದ ಬಂಡವಾಳ ಹಾಗು ಅಪ್ರತಿಮ ಐಡಿಯಾಗಳಿಂದ ಹೊಸದಾಗಿ ಪ್ರಾರಂಭವಾಗುವ ಕಂಪನಿಗಳ ಬಗ್ಗೆ ಇಲ್ಲಿನವರಿಗೆ ಬಹಳ ಗೌರವ ಉಂಟು. ಅವರಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ, ರಿಸೆಪ್ಷನಿಸ್ಟ್ ಇದಾರಾ, ಮತ್ತೊಂದು ಮಗದೊಂದು ಇದೆಯ ಎನ್ನುವುದಕ್ಕಿಂತ ಅವರಲ್ಲಿರುವ ಐಡಿಯ ಮಾರುಕಟ್ಟೆಯಲ್ಲಿ ಗೆಲ್ಲುತ್ತದಾ ಎಂದಷ್ಟೆ ಬಂಡವಾಳ ಹೂಡುವವರು ನೋಡುವುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗೀಗ ಇಂತಹ ಗರಾಜುಗಳಲ್ಲಿ ಆರಂಭವಾಗುತ್ತಿರುವ ಸ್ಟಾರ್ಟ್-ಅಪ್ ಕಂಪನಿಗಳ ಕುರಿತಾದ "The new garage culture – STARTING UP" ಎಂಬ ದೀರ್ಘ ಲೇಖನ ಬಹಳ ಚೆನ್ನಾಗಿದೆ. ಹಾಗೆಯೆ ಅಜೀಮ್ ಪ್ರೇಮ್‍‌ಜಿಯವರ ಸಂದರ್ಶನ ಇದೆ. ಬೆಂಗಳೂರು, ಮುಂಬು, ಹೈದರಾಬಾದ್, ನಿಜಾಮಾಬಾದ್, ಚೆನ್ನೈ, ಶ್ರೀಪೆರಂಬದೂರು ಇಲ್ಲೆಲ್ಲ ಸುತ್ತಾಡಿ ಮಾಡಿರುವ ಈ ಲೇಖನಮಾಲೆ ಓದಿದರೆ ಇಲ್ಲಿನ ಪತ್ರಕರ್ತರ ದುಡಿಮೆ, ಅವರ ಸಂಶೋಧನಾ ಪ್ರವೃತ್ತಿ, ಪ್ರೊಫ್ರೆೆಷನಾಲಿಸಂ ಬಗ್ಗೆ ಅಭಿಮಾನವುಂಟಾಗದೆ ಇರದು.