(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
"ಎಲ್ಲಾ ಅಡೆತಡೆಗಳನ್ನು ದಾಟಿ ವಿಮಾನ ಕ್ಷೇಮವಾಗಿ ನೆಲಕ್ಕಿಳಿಯಿತು." "ವಿಮಾನದಲ್ಲಿದ್ದವರೆಲ್ಲ ಸಂತೋಷವಾಗಿ ಚಪ್ಪಾಳೆ ತಟ್ಟಿ ವಿಮಾನ ಚಾಲಕರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು." ಹೀಗೆ ಅನೇಕ ಕಡೆ ಓದಿದ್ದೆ. ನನ್ನ ಹಲವಾರು ವಿಮಾನ ಪ್ರಯಾಣಗಳಲ್ಲಿ ಇಂತಹುದು ಎಂದೂ ಆಗಿರಲಿಲ್ಲ. ಆಗಬೇಕು ಎಂಬ ಆಸೆಯೂ ನನಗಿರಲಿಲ್ಲ. ಅಕ್ಕ ಸಮ್ಮೇಳನಕ್ಕೆ ಮೂರು ದಿನದ ಹಿಂದೆ ಅಮೇರಿಕದ ನೆಲ ಮುಟ್ಟಿದ ಅರ್ನೆಸ್ಟೊ ಚಂಡಮಾರುತ, ಕ್ರಮೇಣ ಬಲವೃದ್ಧಿಸಿಕೊಂಡು ಸಮ್ಮೇಳನ ನಡೆಯುತ್ತಿದ್ದ ಕಡೆಗೆ ತನ್ನ ಪಥ ಬದಲಾಯಿಸಿತ್ತು. ಹಾಗಾಗಿ ಅಮೇರಿಕದ ಬೇರೆ ಕಡೆಯಿಂದ ವಿಮಾನಗಳಲ್ಲಿ ಬರಬೇಕಾಗಿದ್ದವರಿಗೆಲ್ಲ ಸ್ವಲ್ಪ ಚಿಂತೆ ಪ್ರಾರಂಭವಾಗಿತ್ತು. ನನಗೂ ಇದು ಸುಮಾರು 4000 ಕಿ.ಮಿ. ದೂರದ ವಿಮಾನ ಪ್ರಯಾಣ.
ನಾನು ಇಳಿಯಬೇಕಾಗಿದ್ದ ವಿಮಾನ ವಾಷಿಂಗ್ಟನ್ ಡಿ.ಸಿ. ಸಮ್ಮೇಳನ ನಡೆಯುತ್ತಿರುವ ಜಾಗದಿಂದ 60 ಕಿ.ಮಿ. ದೂರದಲ್ಲಿತ್ತು. ಐದು ವರ್ಷಗಳ ಹಿಂದೆ ಆದ ಭಯೋತ್ಪಾದಕರ ಅಟ್ಟಹಾಸದ ನಂತರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇಳಿಯುವ ವಿಮಾನಗಳಲ್ಲಿ ಕೊನೆಯ 30 ನಿಮಿಷಗಳಲ್ಲಿ ಪ್ರಯಾಣಿಕರು ತಮ್ಮ ಕುರ್ಚಿಯಿಂದ ಎದ್ದು ಓಡಾಡುವಂತಿಲ್ಲ. ಅದನ್ನು ಘೋಷಿಸಿದ ವಿಮಾನದ ಚಾಲಕ. ಅಷ್ಟೊತ್ತಿಗೆ ವಿಮಾನ ಸ್ವಲ್ಪ ಮೇಲಕ್ಕೆ ಕೆಳಕ್ಕೆ ಒಲಾಡುತ್ತಿತ್ತು. ನೆಲದಿಂದ ೧೦ ಕಿ.ಮಿ. ಮೇಲೆ ಹಾರಾಡುವ ವಿಮಾನ, ಅಂತರಿಕ್ಷದಲ್ಲಿನ ವಾಯು-ಒತ್ತಡ ವೈಪರೀತ್ಯಗಳಿಂದಾಗಿ ಆಗಾಗ ಸ್ವಲ್ಪ ಓಲಾಡುತ್ತದೆ. ಇದ್ದಕ್ಕಿದ್ದಂತೆ ಹಾರುತ್ತಿರುವ ಎತ್ತರದಿಂದ ಹತ್ತಾರು ಅಡಿ ಕೆಳಕ್ಕೆ ಸರ್ರನೆ ಜಾರಿಬಿಡುತ್ತದೆ. ಆಗ ಪ್ರಯಾಣಿಕರಿಗೆ ರೋಲರ್‌ಕೋಸ್ಟರ್‌ನಲ್ಲಿ ಮೇಲಿಂದ ಕೆಳಕ್ಕೆ ಜರ್ರನೆ ಜಾರುವಾಗ ಆಗುವ ಅನುಭವವಾಗುತ್ತದೆ. ಅದೇ ರೀತಿ ನಮ್ಮ ವಿಮಾನವೂ ಮಾಡಲು ಪ್ರಾರಂಭಿಸಿತು. ಇದೂ ಆಗಾಗ ಆಗುವಂತೆ ಒಂದೈದು ನಿಮಿಷದಲ್ಲಿ ಮುಗಿಯುತ್ತದೆ ಎಂದುಕೆಂಡೆ. ಹತ್ತಾಯಿತು, ಇಪ್ಪತ್ತಾಯಿತು, ಮುಗಿಯಲೇ ಇಲ್ಲ. ಆಚೆ ನೋಡಿದರೆ ದಟ್ಟವಾದ ಮೋಡಗಳು. ನಾವು ಇನ್ನೂ ಎಷ್ಟು ಮೇಲೆ ಇದ್ದೇವೆ ಎಂದು ನೋಡೋಣವೆಂದರೆ ಮೋಡಗಳಲ್ಲಿ ಅಂಗೈ ಅಗಲ ಖಾಲಿ ಜಾಗವಿಲ್ಲ. ಟಾರು ಇಲ್ಲದ ರಸ್ತೆಗಳಲ್ಲಿ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ, ಅದೂ ಕೊನೇಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಅನುಭವ. ವಿಮಾನ 500 ಅಡಿ ಮೇಲೆ, ಮೋಡಗಳಿಗಿಂತ ಕೆಳಕ್ಕೆ ಬಂದ ಮೇಲೆ ಕೆಳಗೆ ಹಸಿರು ಮರಗಳು, ತುಂಬಿ ಹರಿಯುತ್ತಿರುವ ಪೋಟೋಮ್ಯಾಕ್ ನದಿ ಕಾಣಿಸುತ್ತಿತ್ತು. ಆಗಲೂ ವಿಮಾನದೊಳಗಿನ ಬಸ್ ಪ್ರಯಾಣ ನಿಂತಿರಲಿಲ್ಲ. ನೆಲವನ್ನು ಮುಟ್ಟಲು ಇನ್ನೇನು 40-50 ಅಡಿ ಮಾತ್ರ ಇದೆ, ಆಗಲೇ ರನ್‌ವೇ ಮೇಲೆ ಹಾರುತ್ತಿದೆ ಅನ್ನುವಾಗಲೂ ವಿಮಾನ ಗಾಳಿಯ ರಭಸಕ್ಕೆ ಎಡಕ್ಕೆ ಬಲಕ್ಕೆ ವಾಲಿತು. ನೆಲ ಮುಟ್ಟಿತು. ಬ್ರೇಕ್ ಹಾಕಿದಾಗ ಎಂದಿನಂತೆ ದೊಡ್ಡ ಶಬ್ದ ಕೇಳಿಸಿ, ವಿಮಾನ ನಿಯಂತ್ರಣಕ್ಕೆ ಬಂದಿದ್ದು ಒಳಗಿದ್ದವರಿಗೆಲ್ಲ ಗೊತ್ತಾಯಿತು. ಇನ್ನೇನೂ ತೊಂದರೆಯಿಲ್ಲ ಎಂದು ಖಾತ್ರಿಯಾಗಿದ್ದ ನನ್ನ ಪಕ್ಕದ ಅಮೇರಿಕನ್ ಪ್ರಯಾಣಿಕ ಮೊದಲನೆಯವನಾಗಿ ನಿಟ್ಟುಸಿರು ಬಿಟ್ಟು ಚಪ್ಪಾಳೆ ಹೊಡೆದ. ಅಲ್ಲಿಯವರೆಗೂ ಕಾದಿದ್ದವರಂತೆ ನಾವೆಲ್ಲ ಸೇರಿಕೊಂಡೆವು. ಆವನಿಗೆ ನಾನೆಂದೆ, "ಇದು ನಾನು ಕಂಡ ದ ಮೋಸ್ಟ್ ರಫ್ ಲ್ಯಾಂಡಿಂಗ್." "ನನಗಿದು ಎರಡನೆಯದು," ಎಂದ ಅವನು!
ಇಳಿದ ನಂತರ ಮುಕ್ಕಾಲು ಗಂಟೆಯ ಪ್ರಯಾಣ ಮಳೆ ಮತ್ತು ವಾರಾಂತ್ಯದ ಟ್ರಾಪಿಕ್ ಪ್ರಭಾವದಿಂದಾಗಿ ಎರಡೂವರೆ ಗಂಟೆ ತೆಗೆದುಕೊಂಡಿತು. ಸಮ್ಮೇಳನದ ಜಾಗಕ್ಕೆ ಬರುವಷ್ಟರಲ್ಲಿ ಯಡಿಯೂರಪ್ಪನವರು ತೆರೆಯ ಮೇಲೆ ಟೈ ಸಮೇತ ಸೂಟ್ ಧಾರಿಯಾಗಿ ಮಾತನಾಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಮತ್ತೊಬ್ಬ ಪರಿಚಯಸ್ಥರು ಸಿಕ್ಕರು. ನನ್ನ ವಿಮಾನದ ಅನುಭವ ಹೇಳಿದೆ. ಇದು ನಮ್ಮ ವಿಮಾನದಲ್ಲಿಯೂ ಆಯಿತು, ನನ್ನ ಪಕ್ಕದಲ್ಲಿ ಕುಳಿತಿದ್ದ ಹೆಂಗಸೊಬ್ಬರು "ಪ್ರೇಯಿಂಗ್ ಫಾರ್ ಹರ್ ಲೈಫ್," ಎಂದರವರು. ಸಮ್ಮೇಳನಕ್ಕೆ ಅಂದು ಬಂದ ಬಹಳಷ್ಟು ಜನರಿಗೆ ಆ ಅನುಭವವಾಗಿತ್ತು.
ಕರ್ನಾಟಕದ ಮಂತ್ರಿ ಮಹೋದಯರಿಗೆ, ಶಾಸಕರಿಗೆ, ತಾವು ಇನ್ನೂ ಹಾಲಿಗಳಿದ್ದಾಗಲೆ ತಮ್ಮ ಅಧಿಕಾರದ, ದೌಲಿನ ನಶ್ವರತೆಯ ಅರಿವು, ಅದೂ ಕನ್ನಡಿಗರ ಮಧ್ಯೆಯೇ ಆಗಬೇಕೆಂದರೆ ಅದಕ್ಕೆ ಪ್ರಶಸ್ತವಾದ ಸ್ಥಳ - ಅಕ್ಕ ಸಮ್ಮೇಳನ. ಕರ್ನಾಟಕದ ಎರಡನೇ ಮತ್ತು ಮೂರನೇ ಅಧಿಕಾರ ಸ್ಥಾನಗಳು ಸಾಮಾನ್ಯರಂತೆ ಒಬ್ಬೊಬ್ಬರೆ ಕುಳಿತು, ಎದ್ದು, ಅದೂ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಓಡಾಡುತ್ತಿದ್ದದ್ದು ಎಲ್ಲಾ ಕಡೆ ಕಣ್ಣಿಗೆ ಕಾಣಿಸುತ್ತಿತ್ತು. ಇಲ್ಲಿರುವ ಅರ್ಧಕ್ಕಿಂತ ಹೆಚ್ಚಿನ ಅಮೇರಿಕನ್ನಡಿಗರಿಗೆ ಅವರ ಹೆಸರು ತಿಳಿದಿರುವುದೇ ಸಂದೇಹ. ಇನ್ನು ಅವರ ಜೊತೆ ಮುಖ್ಯಮಂತ್ರಿಯವರ ಪ್ರಾಯೋಜಕತ್ವದಲ್ಲಿ ಬಂದಿದ್ದ ಇತರ 20+ ಶಾಸಕರ ಬಗ್ಗೆ ಹೇಳುವುದೇ ಬೇಡ.
ಇಂತಹ ದೊಡ್ಡ ಸಮ್ಮೇಳನದ ವ್ಯವಸ್ಥೆ ಮಾಡುವಾಗ ಅನೇಕ ಅವ್ಯವಸ್ಥೆಗಳೂ ನಡೆಯುತ್ತವೆ. ೪೦೦೦ ಜನರಿಗೆ ದೊಡ್ಡ ಪರದೆಯ ಮೇಲೆ 'ಗಂಡುಗಲಿ ಕುಮಾರರಾಮ' ಚಿತ್ರ ಪ್ರದರ್ಶನ ಎಂದಿದ್ದರು. ತೋರಿಸಿದ್ದು 200+ ಕುರ್ಚಿಗಳ ಒಂದು ಹಾಲ್‌ನಲ್ಲಿ. ಇದ್ದದ್ದು 20+ ಜನ. ತಾರಾರವರ ಸೈನೈಡ್ ಚಿತ್ರಕ್ಕೆ ಮತ್ತು 'ಹಸೀನಾ' ಚಿತ್ರಕ್ಕೆ ಸಾಹಿತ್ಯದ ಕಾರ್ಯಕ್ರಮಗಳಿಗಿಂತ ಹೆಚ್ಚು ಜನ ಸೇರಿದ್ದರು. ಅಮೇರಿಕನ್ನಡತಿ ಯುವತಿಯೊಬ್ಬರು ನಿರ್ದೇಶಿಸಿದ್ದ `ಗುಟ್ಟು' ಚಲನಚಿತ್ರಕ್ಕೆ 200ಕ್ಕೂ ಮೇಲೆ ಜನ. ಈ ಚಿತ್ರಕ್ಕೆ ಒಳಕ್ಕೆ ಹೊರಕ್ಕೆ ಹೋಗುವವರ ಸಂಖ್ಯೆ ಜಾಸ್ತಿ ಇತ್ತು! ಶಾಸ್ತ್ರೀಯ ಮತ್ತು ಭಾವಗೀತೆಗಳ ಹಾಡುಗಳಿಗೆ ವ್ಯವಸ್ಥೆ ಮಾಡಿದ್ದ 300+ ಸೀಟುಗಳ ಸಭಾಂಗಣ ಕರ್ನಾಟಕದಿಂದ ಬಂದಿದ್ದ ಹಾಡುಗಾರರು ಹಾಡುತ್ತಿದ್ದಾಗಲೆಲ್ಲ ತುಂಬಿಹೋಗುತ್ತಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಮ್‌ರವರ ಹಾಡುಗಳಿಗೆ ಜನ ಖುಷಿಯಿಂದ ನರ್ತಿಸಿದರು. ಕವಿ ಪುತಿನರ ಮಗಳು ಅಲಮೇಲು ಅವರ ಅಮೇರಿಕದಲ್ಲಿನ ಕನ್ನಡ ಕುಟುಂಬಗಳೆರಡರ ಸರಸ ವಿರಸದ ಕತೆಯ 'ಕುಜದೋಷವೊ ಶುಕ್ರದೆಸೆಯೊ' ನಾಟಕವನ್ನೂ, ಸಂಭಾಷಣೆಯನ್ನೂ ಇಲ್ಲಿನವರು ಚೆನ್ನಾಗಿ ಆನಂದಿಸಿದರು.
ಇವೆಲ್ಲದರ ಮಧ್ಯೆ 'ಅಕ್ಕ' ಮಾಡುವ ಸಮಾಜಸೇವಾ ಕಾರ್ಯಕ್ರಮಗಳ ಬಗ್ಗೆ ಸಮರ್ಥವಾಗಿ ಜನಕ್ಕೆ ತಿಳಿಸಿಕೊಡುವಲ್ಲಿ ಸೋತು ಕೇವಲ ಮನರಂಜನಾ ಕಾರ್ಯಕ್ರಮ ಆಯೋಜಕ ಸಮಿತಿಯಾಗುತ್ತಿರುವುದು ಸ್ಪಷ್ಟವಾಗುತ್ತಿತ್ತು. ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವಾಗ ಏನೇನು ಅನಿವಾರ್ಯ ತೊಂದರೆಗಳಿರುತ್ತವೆ ಎನ್ನುವುದನ್ನು ಈ ಇ-ಮೇಯ್ಲ್‌ಗಳ ಯುಗದಲ್ಲಿಯೂ ವಿವರಿಸದೆ ತಪ್ಪು ಮಾಡದೆ ಬಂದಿದ್ದವರಿಂದ ಬೈಸಿಕೊಳ್ಳುತ್ತಿದ್ದರು. ಉದಾಹರಣೆಗೆ, ಊಟಕ್ಕೆ ಅರ್ಧ ಕಿ.ಮಿ. ದೂರ ವ್ಯವಸ್ಥೆ ಮಾಡಿದ್ದರಿಂದ ನೂರಾರು ಸಾವಿರ ಡಾಲರ್ ಉಳಿತಾಯವಾಗುತ್ತಿರುವದನ್ನು ವಿವರಿಸಿದ್ದರೆ ಸಾಕಿತ್ತು ಜನ ಅರ್ಥ ಮಾಡಿಕೊಳ್ಳುತ್ತಿದ್ದರು. ಇದು ನಾಲ್ಕನೇ ಸಮ್ಮೇಳನ. ಇಷ್ಟೊತ್ತಿಗೆ ಬಹಳಷ್ಟನ್ನು ಕಲಿಯಬೇಕಿತ್ತು. ಹಾಗೆಂದು ಅವರಿಂದ ಬಹಳಷ್ಟನ್ನು ಬಯಸುವುದು ಸಹಾ ತಪ್ಪು. ಸಮಿತಿಯಲ್ಲಿನ ಬಹಳಷ್ಟು ಜನ ಪ್ರತಿದಿನ ನೌಕರಿಗೆ ಹೋಗುವವರು, ಸ್ವಯಂಸೇವಕ ಕಾರ್ಯಕರ್ತರು. ಅತೀವ ಶ್ರಮ ಮತ್ತು ಸಮಯ ಬೇಡುವ ಸಮ್ಮೇಳನದ ಕೆಲಸಕ್ಕೆ ಅವರು ಒಂದು ಪೈಸೆ ಬಯಸುವುದೂ ಇಲ್ಲ, ಸಿಗುವುದೂ ಇಲ್ಲ (ಕೆಲವರಿಗೆ ಪ್ರಚಾರ ಬಿಟ್ಟು). ಅವರ ನಿಸ್ವಾರ್ಥ ಸೇವೆಯಲ್ಲಿ ಪದೇಪದೇ ತಪ್ಪು ಹಿಡಿಯುವುದು, ಅನುಕಂಪ ತೋರಿಸದಿರುವುದು ಸಹಾ ತಪ್ಪು. ಅನಾಮಧೇಯರಾಗಿ ದುಡಿದ ನೂರಾರು ಮಂದಿಗೆ ಬಂದ ಸಾವಿರಾರು ಮಂದಿ ಒಂದು ಹಂತದಲ್ಲಿ ಕೃತಜ್ಞರಾಗಿರಲೇಬೇಕು. ಈ ಲೇಖನ ಕಳಿಸುತ್ತಿರುವಾಗ ಇನ್ನೂ ಅರ್ಧ ದಿನದ ಕಾರ್ಯಕ್ರಮ ಇದ್ದಿದ್ದರಿಂದ, ಆ ನಿಸ್ವಾರ್ಥಿ, ಅನಾಮಧೇಯ ಕನ್ನಡಬಂಧುಗಳಿಗೆ ನನ್ನ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತ, ಉಳಿದವನ್ನು ಮುಂದಿನ ಕಂತಿನಲ್ಲಿ ಬರೆಯುತ್ತೇನೆ.
Sep 3, 2006
'ಅಕ್ಕ' ಸಂಭ್ರಮದಲ್ಲಿ...
Subscribe to:
Post Comments (Atom)
No comments:
Post a Comment