Sep 29, 2006

ಅಯೋಗ್ಯರನ್ನು ಕೈಯ್ಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 13, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ರಾಜಧಾನಿಯ ಹೊರಗೆ ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ವಿಶೇಷ ಅಧಿವೇಶನವನ್ನು ಗಮನಿಸುತ್ತ, ಮೂರು ವರ್ಷದ ಹಿಂದೆ ಬರೆದಿದ್ದ "ಬೆಳಗಾವಿ, ಹೊಸೂರು ಮತ್ತು ಅಯೋಗ್ಯ ಆಡಳಿತಗಾರರು" ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಾಗ ತೀವ್ರವಾಗಿ ಅನ್ನಿಸುತ್ತಿರುವುದು ಏನೆಂದರೆ, ಇದರಲ್ಲಿ ಜನರ ಪಾಲು ಏನೂ ಇಲ್ಲವೆ ಎನ್ನುವುದು. ಅಯೋಗ್ಯ ಆಡಳಿತಗಾರರು ಎಂದರೆ ಯಾರು? ಪ್ರಜಾಪ್ರಭುತ್ವದಲ್ಲಿ ಅಯೋಗ್ಯರು ಅದು ಹೇಗೆ ಆಡಳಿತಗಾರರಾದರು? ಅವರನ್ನು ಚುನಾಯಿಸಿದವರು ಯಾರು? ಯಾಕಾಗಿ ಅಂತಹವರನ್ನು ಚುನಾಯಿಸಿದರು? ಚುನಾಯಿಸಿಯಾದ ಮೇಲೆ ಅವರಿಂದ ಕನ್ನಡ ಉದ್ಧಾರವಾಗಲಿಲ್ಲ, ಕನ್ನಡ ಜನಪದ ಉದ್ಧಾರವಾಗಲಿಲ್ಲ ಎಂದರೆ ನಿಜವಾಗಲೂ ಜನರು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರ ಹೆಗಲಿಗೆ ಪ್ರಜ್ಞಾಪೂರ್ವಕವಾಗಿ ವರ್ಗಾಯಿಸುತ್ತಿಲ್ಲವೆ? ಚುನಾವಣೆಯ ನಂತರ ರಾಜಕಾರಣಿಗಳು ಹೇಳುವ ಕ್ಲೀಷೆಯುಕ್ತ ಮಾತಾದ ಮತದಾರ ಪ್ರಭು ನೀಡಿದ ತೀರ್ಪುಎನ್ನುವುದು ಯಾವಾಗಲೂ ನ್ಯಾಯವಾದದ್ದೆ? ಯೋಗ್ಯವಾದದ್ದೆ?

ಚುನಾವಣೆಯಲ್ಲಿ ಒಬ್ಬರನ್ನು ಗೆಲ್ಲಿಸಲು ಬಹುಸಂಖ್ಯಾತ ಮತದಾರರಿಗೆ ಒಂದು ಕಾರಣವಿರುತ್ತದೆ. ಉದಾಹರಣೆಗೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರು ಗೆಲ್ಲಲು ಆ ಕ್ಷೇತ್ರದಲ್ಲಿ ಮತ ಚಲಾಯಿಸಿದ ಬಹುಜನರು ತಾವು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿರುವುದು. ಈಗ ಆ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಅಂದರೆ ಅದಕ್ಕೆ ಕಾರಣ ಆ ಕ್ಷೇತ್ರದ ಶಾಸಕರಲ್ಲ, ಬದಲಿಗೆ ಅಲ್ಲಿನ ಜನ. ಅವರಿಗೆ ಅಭಿವೃದ್ಧಿಗಿಂತ ಅವರ ಶಾಸಕ ಪ್ರತಿ ಸಲದ ವಿಧಾನಸಭಾ ಅಧಿವೇಶನದಲ್ಲಿ ಮರಾಠಿಯಲ್ಲಿ ಕೂಗಾಡುತ್ತ, ಕಪ್ಪು ಬಟ್ಟೆ ಧರಿಸಿ ಧರಣಿ ಕೂರುತ್ತ, ಸಭಾತ್ಯಾಗ ಮಾಡುತ್ತ, ಮಹಾರಾಷ್ಟ್ರದಿಂದ ಒಬ್ಬ ರಾಜಕಾರಣಿಯನ್ನು ಬೆಳಗಾವಿಗೆ ಆಹ್ವಾನಿಸಿ ಪ್ರಚೋದನಾಕಾರಿ ಭಾಷಣ ಮಾಡಿಸುತ್ತ ತಮ್ಮ ಊರು ಮಹಾರಾಷ್ಟ್ರಕ್ಕೆ ಸೇರುವ ತನಕ ಹೋರಾಡುತ್ತಿರಬೇಕು. ಈ ಮಧ್ಯೆ ಅವರ ಊರು ಎಷ್ಟೇ ಹಿಂದುಳಿದು ಬಿಟ್ಟರೂ ಅವರಿಗೆ ಚಿಂತೆಯಿಲ್ಲ.

ಆದರೆ, ಇಡೀ ಉತ್ತರ ಕರ್ನಾಟಕವೆ ಹಿಂದುಳಿದಿದೆ ಎನ್ನುವ ಮಾತೊಂದಿದೆಯಲ್ಲ? ಅಲ್ಲಿನ ಮಿಕ್ಕ ಕ್ಷೇತ್ರಗಳ ಜನಕ್ಕೆ ಮರಾಠಿಯೆನ್ನುವುದು ಒಂದು ವಿಷಯವೆ ಅಲ್ಲವಲ್ಲ? ಹಾಗಾದರೆ, ಆ ಭಾಗ ಹಿಂದುಳಿದಿರಲು ಕಾರಣವೇನು? ಅಲ್ಲಿನ ಜನಗಳಿಗೆ ಅಭಿವೃದ್ಧಿಗಿಂತ ಬೇರೆ ವಿಷಯಗಳು ಮುಖ್ಯವಾಗುತ್ತಿವೆಯೆ?

ಇರಬಹುದು. ಇರಬಹುದು ಏನು, ಇರಲೇಬೇಕು. ತಮ್ಮ ಜಾತಿಯ ಯಾರೋ ಒಬ್ಬ ಮುಖ್ಯಮಂತ್ರಿ ಆಗುತ್ತಾನೆ ಎಂದರೆ ಮಿಕ್ಕೆಲ್ಲ ವಿಷಯಗಳು ಗೌಣವಾಗಿ ಅವರವರ ಕ್ಷೇತ್ರಗಳಲ್ಲಿ ಆ ಜಾತಿಯ ಜನ ಆ ಸಂಭವನೀಯ ಮುಖ್ಯಮಂತ್ರಿಯ ಪಕ್ಷಕ್ಕೆ ಮತ ನೀಡುವುದಿಲ್ಲವೆ? ಯಾವುದೋ ಊರಿನಲ್ಲಿ ಅಲ್ಲಿನ ಸ್ಥಳೀಯ ಕೋಮುವಾದಿಗಳು ತಮ್ಮ ಊರಿನ ಒಂದು ಜಾಗ ಮಸೀದಿಗೆ ಸೇರಿದ್ದು, ದೇವಸ್ಥಾನಕ್ಕೆ ಸೇರಿದ್ದು ಎಂದು ಕಿತ್ತಾಡಿಕೊಳ್ಳುತ್ತಿದ್ದರೆ, ಬೇರೆ ಕ್ಷೇತ್ರಗಳಲ್ಲಿನ ಜನ ತಮ್ಮ ಕೋಮುವನ್ನು ಪ್ರತಿನಿಧಿಸುವ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲವೆ? ತಮ್ಮ ಊರಿನ ಯಾವುದೊ ಒಂದು ಜಾತಿಯೊ ಪಂಗಡವೊ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿದೆ ಎಂದರೆ, ಅಭ್ಯರ್ಥಿ ಯಾರೆಂದು ಗಮನಿಸದೆ ಆ ಪಂಗಡದ ವಿರೋಧಿ ಪಕ್ಷಕ್ಕೆ ಇನ್ನೊಂದು ಪಂಗಡದವರು ಮತ ಚಲಾಯಿಸುವುದಿಲ್ಲವೆ? ಚುನಾವಣಾ ಪ್ರಚಾರ ಸಮಯದಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಯಾರು ಹೆಚ್ಚಿನ ಹಣ ಮತ್ತು ಹೆಂಡ ಕೊಡುತ್ತಾನೊ ಅಂತಹ ಅಭ್ಯರ್ಥಿಯ ಪರ ನಿರ್ಲಜ್ಜೆಯಿಂದ ಓಡಾಡಿ ಮತ ಹಾಕುವುದಿಲ್ಲವೆ? ಹೀಗೆ ಪಂಗಡ, ಜಾತಿ, ಮತ, ಹೆಂಡ, ಹಣ ಮುಂತಾದ ಕ್ಷುಲ್ಲಕ, ಕೀಳು ವಿಷಯಗಳ ಆಧಾರದ ಮೇಲೆ ಮತ ಹಾಕುವ ಜನ, ನಂತರ ನಮ್ಮ ಊರುಕೇರಿ ಅಭಿವೃದ್ಧಿಯಾಗಲಿಲ್ಲ ಎಂದರೆ ಅದಕ್ಕೆ ಹೊಣೆ ಯಾರು? ಇಡೀ ಉತ್ತರ ಕರ್ನಾಟಕಕ್ಕೆ ದಕ್ಷಿಣ ಕರ್ನಾಟಕದ ಜನ ಒಟ್ಟಾಗಿ ಮೋಸ ಮಾಡುತ್ತಿದ್ದಾರೆಯೆ? ರಾಜ್ಯದ ಗ್ರಾಮೀಣ ಭಾಗಕ್ಕೆ ಬೆಂಗಳೂರು ನಗರ ಮೋಸ ಮಾಡುತ್ತಿದೆಯೆ?

ತಮ್ಮ ಊರು, ತಾಲ್ಲೂಕು, ಜಿಲ್ಲೆ ಉದ್ಧಾರವಾಗಲಿಲ್ಲ ಎನ್ನುವ ಜನ ಮೊದಲು ನೋಡಬೇಕಾದದ್ದು ತಮ್ಮನ್ನು ಪ್ರತಿನಿಧಿಸುತ್ತಿರುವವರು ಬೆಂಗಳೂರಿನಲ್ಲಿ ಕಟ್ಟಿಕೊಂಡಿರುವ ಅರಮನೆಗಳನ್ನು, ಆರ್ಥಿಕ ಸಾಮ್ರಾಜ್ಯಗಳನ್ನು, ಅವರು ಮಾಡುವ ತಮ್ಮ ಮಕ್ಕಳ ವೈಭವೋಪೇತ ಮದುವೆಗಳನ್ನು. ಸ್ವಂತಕ್ಕೆ ಇಷ್ಟೆಲ್ಲ ಮಾಡಿಕೊಳ್ಳುವ ಜನ ತಮ್ಮ ಕ್ಷೇತ್ರಕ್ಕೆ ಏನೂ ಮಾಡುತ್ತಿಲ್ಲ ಎಂದರೆ ಅದಕ್ಕೆ ನಾವು ಏನೋ ತಪ್ಪು ಮಾಡಿ ಅವರನ್ನು ಚುನಾಯಿಸಿದ್ದೇವೆ, ಅದಕ್ಕೆ ನಮ್ಮ ಕ್ಷೇತ್ರದ ಉಸಾಬರಿ ಮಾಡೆಂದು ಕೇಳುವ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಜನ ಭಾವಿಸಬೇಕೆ ಹೊರತು ತಮ್ಮ ಜನಪ್ರತಿನಿಧಿಗಳು ಏನೂ ಮಾಡುತ್ತಿಲ್ಲ ಎಂದಲ್ಲ. ಶಾಸಕರು ಏನೂ ಮಾಡಲಾಗದವರಾಗಿದ್ದರೆ ಅಷ್ಟೆಲ್ಲ ಕೋಟ್ಯಾಂತರ ರೂಪಾಯಿಗಳನ್ನು ಅದು ಹೇಗೆ ಮಾಡಿಕೊಳ್ಳುತ್ತಿದ್ದರು? ಮುಂದಿನ ಚುನಾವಣೆಗೆ ಊರಿಗೆ ಬಂದು ಜಾತಿ-ಮತ-ಹಣ-ಹೆಂಡದಿಂದಲೆ ಮತ್ತೊಂದು ಚುನಾವಣೆ ಹೇಗೆ ಗೆಲ್ಲುತ್ತಿದ್ದರು?

ವಿಶೇಷ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಾದಾಗ ರಾಜ್ಯದ ಎಲ್ಲಾ ಶಾಸಕರು ಅಲ್ಲಿ ಇಷ್ಟು ತುರಾತುರಿಯಲ್ಲಿ ಸೇರಬೇಕಾಗಿ ಬಂದ ಕಾರಣವನ್ನು ಗಮನಿಸಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅದೊಂದನ್ನೆ ಚರ್ಚಿಸಬೇಕಿತ್ತು. ಅದಕ್ಕಾಗಿ ಶಾಸನಗಳನ್ನು ರೂಪಿಸಬೇಕಿತ್ತು. ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಶಾಸಕರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿಕೊಳ್ಳಬೇಕಿತ್ತು; ಕೇವಲ ಬಾಯಿ ಮಾತಿನ ಆಶ್ವಾಸನೆಗಳನ್ನಲ್ಲ. ಆದರೆ ಆದದ್ದೇನು? ಧರಂ, ಖರ್ಗೆ, ಪಾಟೀಲ್ ಆದಿಯಾಗಿ ಉತ್ತರ ಕರ್ನಾಟಕದ ಅನೇಕ ಧೀಮಂತ ಶಾಸಕರು ಈ ಅಧಿವೇಶನ ಕರೆದಿರುವ ಔಚಿತ್ಯ ಮತ್ತು ಕ್ರಮಬದ್ಧತೆಯನ್ನು ಪ್ರಶ್ನಿಸುತ್ತ ಗಲಭೆ ಗದ್ದಲ ಎಬ್ಬಿಸಿದರೆ ಹೊರತು ಇದೊಂದು ವಿಶೇಷ ಅಧಿವೇಶನ, ಇಲ್ಲಿ ರಾಜಕೀಯ ಬೇಡ ಎಂದುಕೊಳ್ಳಲಿಲ್ಲ! ಅವರು ಹೀಗೆ ನಡೆದುಕೊಳ್ಳಲು ಅವರಲ್ಲ ಕಾರಣ. ಅವರನ್ನು ಪದೇಪದೆ ಚುನಾಯಿಸಿದ ಮತದಾರರು. ಇದು ನಮ್ಮ ತಪ್ಪುಗಳಿಗೆಲ್ಲ ಹೊಣೆ ಹೊರುವ ಸಮಯ. ಇನ್ನೊಬ್ಬರ ಮೇಲೆ ಜಾರಿಸಲು ಹೋದರೆ ನಮ್ಮ ಜೀವನ ಸಹನೀಯವಾಗಿರುವುದಿಲ್ಲ, ನಮ್ಮ ಮಕ್ಕಳು ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ.

ಈಗಲೂ ಕಾಲ ಮಿಂಚಿಲ್ಲ. ಉತ್ತರ ಕರ್ನಾಟಕದ, ಹಾಗೆಯೆ ಇಡೀ ರಾಜ್ಯದ ಗ್ರಾಮೀಣ ಭಾಗಗಳ ವಿದ್ಯಾವಂತ ಜನರು, ವಕೀಲರು, ಶಿಕ್ಷಕರು, ಸಮಷ್ಠಿ ಪ್ರಜ್ಞೆಯಲ್ಲಿ ಚಿಂತಿಸಿ, ನಾಯಕತ್ವ ವಹಿಸಿ, ಅಭಿವೃದ್ಧಿಯ ಸಾರಥ್ಯ ವಹಿಸಬಲ್ಲ ಯೋಗ್ಯರನ್ನು ಚುನಾಯಿಸುವ ಭೂಮಿಕೆ ಸಿದ್ಧಪಡಿಸಿಕೊಳ್ಳಬೇಕೆ ಹೊರತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಅಯೋಗ್ಯರು ಆಳುವುದು ಅಯೋಗ್ಯರನ್ನೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಅಯೋಗ್ಯತೆಯಿಂದ...

No comments: