May 16, 2008

ಚುನಾವಣಾ ವೆಚ್ಚದ ಮಿತಿ ಎಂಬ ಅಣಕ ಮತ್ತು ಚಿಹ್ನೆ ಬದಲಾಯಿಸಿದ ಚುನಾವಣಾ ಆಯೋಗದ ಬೇಜವಬ್ದಾರಿತನ

[ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮತ್ತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರಿಗೆ ಕಳುಹಿಸಿರುವ ಪತ್ರ.]

ದಿನಾಂಕ: ಮೇ 15, 2008

ಗೆ:
ಮುಖ್ಯ ಚುನಾವಣಾಧಿಕಾರಿಗಳು
(ಕರ್ನಾಟಕ ರಾಜ್ಯ)
ಡಾ. ಅಂಬೇಡ್ಕರ್ ಬೀದಿ,
ಬೆಂಗಳೂರು - ೫೬೦೦೦೧

ವಿಷಯ: ಚುನಾವಣಾ ವೆಚ್ಚದ ಮಿತಿ ಎಂಬ ಅಣಕ ಮತ್ತು ಚಿಹ್ನೆ ಬದಲಾಯಿಸಿದ ಚುನಾವಣಾ ಆಯೋಗದ ಬೇಜವಬ್ದಾರಿತನ

ಮಾನ್ಯರೆ,

ರವಿ ಕೃಷ್ಣಾ ರೆಡ್ಡಿ ಎಂಬ ನಾನು, ಭಾರತದ, ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಪ್ರಸಕ್ತ ಅನೈತಿಕ ರಾಜಕಾರಣದ ಕೆಲವು ರೀತಿನೀತಿಗಳ ವಿರುದ್ಧ ಒಂದು ನೈತಿಕವಾದ, ನ್ಯಾಯಯುತವಾದ, ಪರ್ಯಾಯ ರಾಜಕಾರಣದ ಮಾದರಿಯೊಂದನ್ನು ನಮಗೆ ನಾವೆ ಸೃಷ್ಟಿಸಿಕೊಳ್ಳಬೇಕೆಂದು ಬಯಸಿ, ಆ ನಿಟ್ಟಿನಲ್ಲಿನ ಪ್ರಯತ್ನವಾಗಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಒಂದು ಶಾಸಕ ಸ್ಥಾನಕ್ಕೆ ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಹೇರಳವಾಗಿ ಇರುವಾಗ, ಅದನ್ನೆಲ್ಲ ಪ್ರತಿರೋಧಿಸಬೇಕೆಂದು ಚುನಾವಣೆ ಖರ್ಚಿಗೆ ನಾನು ಜನರಿಂದಲೆ ದೇಣಿಗೆ ಸಂಗ್ರಹಿಸಿದೆ. ರಾಗಿಗುಡ್ಡ ಜೋಪಡಿಯ ಕಾಂತಮ್ಮ ಎಂಬ 70 ವರ್ಷದ ಮುದುಕಿಯ ಬೆವರಿನ ದುಡಿಮೆಯ 10 ರೂಪಾಯಿಯಿಂದ ಹಿಡಿದು, ದೇಶವಿದೇಶಗಳಲ್ಲಿರುವ ಸುಮಾರು 105 ಭಾರತೀಯರು ಒಟ್ಟುಗೂಡಿಸಿದ ಸುಮಾರು 4,22,000 ಸಾವಿರ ರೂಪಾಯಿ ಮತ್ತು ನನ್ನ ವೈಯಕ್ತಿಕ 23000 ಸಾವಿರ ರೂಪಾಯಿಯಲ್ಲಿ ನನ್ನ ಚುನಾವಣಾ ಖರ್ಚನ್ನು ನಿಭಾಯಿಸಿದ್ದೇನೆ. ನಾವು ಮಾಡಿದ ಪ್ರತಿ ಖರ್ಚಿನ ವಿವರವನ್ನು ಆಯೋಗದ ನಿಯಮಾವಳಿ ಪ್ರಕಾರ ಪ್ರತಿ ಮೂರು ದಿನಕ್ಕೆ ಜಯನಗರ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇನೆ ಹಾಗೂ ಚುನಾವಣೆ ಮುಗಿದ ತಕ್ಷಣ ಈ ವಿವರಗಳನ್ನು ಸಾರ್ವಜನಿಕರಿಗೆ ಪತ್ರಿಕೆಗಳ ಮುಖಾಂತರ ಬಿಡುಗಡೆ ಮಾಡಿದ್ದೇನೆ. ಹಾಗಾಗಿ, ಇದನ್ನು ತಾವೂ ಗಮನಿಸಿಯೇ ಇರುತ್ತೀರ ಎಂದು ಭಾವಿಸುತ್ತೇನೆ.

ಇಲ್ಲಿ, ಈ ಮುನ್ನುಡಿಯು ಮುಖ್ಯವಾಗಲು ಮುಖ್ಯವಾದ ಕಾರಣ ಏನೆಂದರೆ, ನಮಗೆ ಜಯನಗರ ಕ್ಷೇತ್ರದ ಚುನಾವಣಾಧಿಕಾರಿಯವರ ಸಿಬ್ಬಂದಿಯವರು ಹೇಳಿದ ಪ್ರಕಾರ, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಚುನಾವಣಾ ವೆಚ್ಚ ಮಾಡಿರುವವರು ನಾವೆ ಅಂತೆ! ಬೇರೆ ಇನ್ಯಾವುದೇ ಅಭ್ಯರ್ಥಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ವೆಚ್ಚದ ವಿವರ ಕೊಟ್ಟಿಲ್ಲವಂತೆ! ಇದು ಹೇಗೆ ಸಾದ್ಯ ಎನ್ನುವುದೆ ನನ್ನ ಪ್ರಶ್ನೆ. ಯಾಕೆಂದರೆ, ನಾನೆ ಸ್ವತಃ ಕಂಡ ಹಾಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಈ ಕ್ಷೇತ್ರದಲ್ಲಿ ನೂರಾರು ಕಾರ್ಯಕರ್ತರ ಜೊತೆ ಅನೇಕ ಸಲ ಲಿಗಳನ್ನು ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸತ್‍ಸದಸ್ಯರು ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಇರುವ ಶಾಫಿಂಗ್ ಕಾಂಪ್ಲೆಕ್ಸ್ ಸುತ್ತ ಎರಡೆರಡು ಬಾರಿ ರ್‍ಯಾಲಿ ನಡೆಸಿದ್ದಕ್ಕೆ ನಾನೆ ಸಾಕ್ಷಿಯಾಗಿದ್ದೇನೆ. ಆ ಸಮಯದಲ್ಲೆಲ್ಲ ದಿನಗೂಲಿ ಸಂಬಳದ ನೂರಾರು ಕಾರ್ಯಕರ್ತರು, ಅನೇಕ ಕಾರುಗಳು, ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ನೂರಾರು ದಿನಗೂಲಿ ಕಾರ್ಯಕರ್ತರೊಡನೆ ಕಲ್ಯಾಣಮಂಟಪವೊಂದರಲ್ಲಿ ಅಭ್ಯರ್ಥಿಯೊಬ್ಬರು ಊಟಮಾಡುತ್ತಿದ್ದನ್ನು ನಾನೆ ಸ್ವತಃ ಕಣ್ಣಾರೆ ಕಂಡಿದ್ದೇನೆ. ಬಣ್ಣಬಣ್ಣದ, ದುಬಾರಿಯಾದ ಕರಪತ್ರಗಳನ್ನು ಮತ್ತು ಸಣ್ಣಪುಸ್ತಿಕೆಗಳನ್ನು ಹಲವಾರು ಅಭ್ಯರ್ಥಿಗಳು ತಮ್ಮ ಪ್ರಚಾರ ಸಾಮಗ್ರಿಯಾಗಿ ಕ್ಷೇತ್ರದಾದ್ಯಂತ ಹಂಚಿದ್ದಾರೆ.

ಇಷ್ಟೆಲ್ಲ ಖರ್ಚು ಮಾಡಿದರೂ, ಅವರ ಚುನಾವಣಾ ವೆಚ್ಚ ೪ ಲಕ್ಷ ದಾಟಿಲ್ಲ ಎಂದರೆ, ಇದೊಂದು ಕ್ರೂರ ಅಣಕವಲ್ಲವೆ?

ಚುನಾವಣಾ ಆಯೋಗದ ಅಧಿಕಾರಿಗಳು ಈ ಕ್ಷೇತ್ರದಲ್ಲಿ ಆದ ಚುನಾವಣಾ ಪ್ರಚಾರದ ಮೆರವಣಿಗೆಗಳ ವಿಡಿಯೊ ಚಿತ್ರೀಕರಿಸಿಲ್ಲವೆ? ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮತ್ತು ಅವಕ್ಕೆ ತಗಲಬಹುದಾದ ವೆಚ್ಚವನ್ನು, ಮತ್ತು ಅಭ್ಯರ್ಥಿಗಳು ಮಾಡಬಹುದಾದ ಇನ್ನಿತರ ಖರ್ಚುವೆಚ್ಚಗಳನ್ನು ಗಮನಿಸಿಲ್ಲವೆ?

ಇವೆಲ್ಲವುಗಳನ್ನು ಸೂಕ್ಷವಾಗಿ ಗಮನಿಸಿಯಾದ ಮೇಲೆ, ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಸರಿಯಾಗಿ, ಕಾನೂನುಬದ್ಧವಾಗಿ ನಿರ್ವಹಿಸಿಲ್ಲ ಎಂದೆ ನಾನು ಭಾವಿಸುತ್ತೇನೆ. ಅಭ್ಯರ್ಥಿಗಳ ಖರ್ಚುವೆಚ್ಚದ ಬಗ್ಗೆ ನಿಗಾ ಇಡದೆ, ಅ ಮೂಲಕ ಚುನಾವಣಾ ಅಯೋಗ ಅಭ್ಯರ್ಥಿಗಳಿಗೆ ಮುಕ್ತ ಸಂದೇಶವೊಂದನ್ನು ರವಾನಿಸುತ್ತಿದೆ ಮತ್ತು ಆ ಸಂದೇಶ, "ನೀವು ಎಷ್ಟಾದರೂ ಖರ್ಚು ಮಾಡಿಕೊಳ್ಳಿ, ಆದರೆ ಲೆಕ್ಕ ಮಾತ್ರ 10 ಲಕ್ಷದ ಮಿತಿಯಲ್ಲೆ ತೋರಿಸಿ. ನಾವು ಯಾವುದನ್ನೂ ಪರಿಶೀಲಿಸುವುದಿಲ್ಲ. ಈ ಹತ್ತು ಲಕ್ಷದ ಮಿತಿ ಎನ್ನುವುದು ಬಾಯುಪಚಾರದ, ಕಾಗದದ ಮೇಲಿರುವ ಕಾನೂನು ಮಾತ್ರ." ಎಂಬ ಸಂದೇಶವಾಗಿದೆ ಎಂದು ನಾನು ಭಾವಿಸುತ್ತೇನೆ.

ಈ ರೀತಿಯಾಗಿ ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿಲ್ಲ ಮತ್ತು ಚುನಾವಣಾ ವೆಚ್ಚದ ಬಗೆಗಿನ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಯಾವುದೇ ವಿಶೇಷ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಅಂಶ ನನ್ನಲ್ಲಿ ತೀವ್ರವಾದ ಕಳವಳ ಹುಟ್ಟಿಸಿದೆ. ನ್ಯಾಯಬದ್ಧವಾಗಿ, ಕಾನೂನುರೀತ್ಯವಾಗಿಯೆ ಚುನಾವಣೆ ಎದುರಿಸಬೇಕು ಎಂದುಕೊಳ್ಳುವ ಅರ್ಹರಿಗೆ ಮತ್ತು ಸತ್ಪ್ರಜೆಗಳಿಗೆ ನಿಮ್ಮಿಂದ ಸಿಗಲೇಬೇಕಾದ ನ್ಯಾಯ ಸಿಗುತ್ತಿಲ್ಲ ಎನ್ನುವುದನ್ನು ನಾನು ತೀವ್ರ ವಿಷಾದದಿಂದ ಹೇಳಬೇಕಾಗಿದೆ. ತಾವು ಈ ಕೂಡಲೆ, ಉಳಿದಿರುವ ಮೂರನೆ ಹಂತದ ಚುನಾವಣೆಯಲ್ಲಾದರೂ ಅಭ್ಯರ್ಥಿಗಳ ಮತ್ತು ಅವರ ಕಾರ್ಯಕರ್ತರ ಹಿಂದೆ ವೀಕ್ಷಕರನ್ನು ಬಿಟ್ಟು, ಅವರು ಯಾವುದೇ ರೀತಿಯಲ್ಲೂ ತಮ್ಮ ವೆಚ್ಚದ ಮಿತಿ ದಾಟದ ರೀತಿ ನೋಡಿಕೊಂಡು, ನ್ಯಾಯಬದ್ಧವಾಗಿ ನಡೆದುಕೊಳ್ಳುವ ಅಭ್ಯರ್ಥಿಗಳಿಗೆ ನಿಮ್ಮಿಂದ ಅನ್ಯಾಯವಾಗದ ರೀತಿ ನೋಡಿಕೊಳ್ಳಬೇಕೆಂದು ಈ ಸಮಯದಲ್ಲಿ ತಮ್ಮನ್ನು ಆಗ್ರಹಿಸುತ್ತೇನೆ.

ಇದೇ ಸಂದರ್ಭದಲ್ಲಿ, ನಾನು ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗೆ ಕೊಟ್ಟಿರುವ ದೂರಿನ ಬಗ್ಗೆಯೂ ತಮ್ಮ ಗಮನ ಸೆಳೆಯ ಬಯಸುತ್ತೇನೆ. ನನಗೆ ಚುನಾವಣಾ ಆಯೋಗ ನೀಡಿದ್ದ ಚಿಹ್ನೆ "ನಗಾರಿ." ಆದರೆ, ಮತಪೆಟ್ಟಿಗೆಯ ಮೇಲಿದ್ದ ಚಿಹ್ನೆಯೆ ಬೇರೆಯದಾಗಿತ್ತು. ನಾವು ಬೀದಿನಾಟಕ ಮತ್ತು ಅದರಲ್ಲಿ ಉಪಯೋಗಿಸಿದ ನಗಾರಿಗಳಿಗಾಗಿ ಸುಮಾರು 30000 ರೂಪಾಯಿ ವೆಚ್ಚ ಮಾಡಿದ್ದೆವು. ಜಯನಗರ ಕ್ಷೇತ್ರದಲ್ಲಿ ಅವಿದ್ಯಾವಂತ ಮತದಾರರು ಹೆಚ್ಚಿಗೆ ಇರುವ ಭಾಗಗಳೆಲ್ಲೆಲ್ಲ ಬೀದಿನಾಟಕಗಳನ್ನು ಮಾಡಿ, ನಮ್ಮ ಚಿಹ್ನೆ ನಗಾರಿಯ ಬಗ್ಗೆ ಅರಿವು ಮೂಡಿಸಿದ್ದೆವು. (ಹೇಳಬೇಕೆಂದರೆ, ಕೆಲವು ತಮಿಳು ಭಾಷಿಕ ಮತದಾರರು ಈ ಚಿಹ್ನೆ ತಮಿಳುನಾಡಿನ ರಾಜಕೀಯ ಪಕ್ಷದ ಚಿಹ್ನೆ ಎಂತಲೆ ನಮಗೆ ನೆನಪಿಸುತ್ತಿದ್ದರು!) ಆದರೆ, ಮತಪೆಟ್ಟಿಗೆಯ ಮೇಲೆ ಇದ್ದ ಚಿಹ್ನೆ ಚುನಾವಣಾ ಆಯೋಗ ಅಧಿಕೃತವಾಗಿ ನೀಡಿದ್ದ ಚಿಹ್ನೆ ಅಲ್ಲವೇ ಅಲ್ಲ. ಈ ವಿಷಯವಾಗಿ ಕ್ಷೇತ್ರದ ಚುನಾವಣಾಧಿಕಾರಿಗಳು "ಅದೊಂದು ದೊಡ್ಡ ತಪ್ಪಲ್ಲ" ಎನ್ನುವಂತಹ ಮಾತನಾಡಿರುವುದಾಗಿ ಪತ್ರಿಕಾ ವರದಿಗಳು ಹೇಳುತ್ತಿವೆ. ಇಲ್ಲಿ ತಪ್ಪಾಗಿದೆ ಮತ್ತು ಅದಕ್ಕೆ ಕಾನೂನುಬದ್ಧವಾಗಿ ಯಾವಯಾವ ಕ್ರಮಗಳಿವೆ ಎನ್ನುವುದು ಮುಖ್ಯವೆ ಹೊರತು ಇದು ತಪ್ಪೇ ಅಲ್ಲ ಅಥವ ಸಣ್ಣಪ್ರಮಾಣದ ತಪ್ಪಾಗಿದೆ ಎನ್ನುವುದು ಬೇಜವಾಬ್ದಾರಿ ಹೇಳಿಕೆ ಎನ್ನುವುದು ನನ್ನ ಆಭಿಪ್ರಾಯ. ಆದಕಾರಣ, ಈ ವಿಚಾರವಾಗಿ ತಾವು ಯಾವ ಕ್ರಮ ತೆಗೆದುಕೊಂಡಿದ್ದೀರ ಮತ್ತು ನಮಗಿರುವ ಕಾನೂನಿನ ಆಯ್ಕೆಗಳೇನು ಎನ್ನುವುದನ್ನು ದಯವಿಟ್ಟು ನಮಗೆ ತಿಳಿಸಬೇಕೆಂದು ಕೋರುತ್ತೇನೆ. ನಿಮ್ಮಿಂದಲೆ ಈ ವಿವರಗಳನ್ನು ತಿಳಿದುಕೊಳ್ಳುವ ವಿಚಾರ ನನ್ನ ನ್ಯಾಯಬದ್ಧ ಹಕ್ಕುಗಳ ಮಿತಿಯೊಳಗೆಯೆ ಇದೆ ಎಂದು ನಾನು ಭಾವಿಸುತ್ತೇನೆ.

ಜಯನಗರ ಕ್ಷೇತ್ರದಲ್ಲಿ ಚುನಾವಣೆಗೆಂದು ಅತಿ ಹೆಚ್ಚು ಹಣ ವೆಚ್ಚ ಮಾಡಿದ ಅಭ್ಯರ್ಥಿ ನಾನೆ ಎಂಬ ನೈಜ ವಿವರ ಮತ್ತು ಹಾಗೆ ಖರ್ಚು ಮಾಡಲ್ಪಟ್ಟ ಹಣ ಸಾಮಾನ್ಯ ಜನರು ತಮ್ಮ ಬೆವರು ಹರಿಸಿ ದುಡಿದ ಅಮೂಲ್ಯ ಹಣ ಎಂಬ ವಾಸ್ತವ ಸಂಗತಿ ನಾನು ಈ ವಿಚಾರವಾಗಿ ತಮ್ಮಿಂದ ಉತ್ತರಗಳನ್ನು ಪಡೆಯಲು ಮತ್ತು ನ್ಯಾಯವನ್ನು ಆಗ್ರಹಿಸಲು ನೈತಿಕವಾಗಿ ಒತ್ತಾಯಿಸುತ್ತದೆ.

ವಿಶ್ವಾಸಪೂರ್ವಕವಾಗಿ,
ರವಿ ಕೃಷ್ಣಾ ರೆಡ್ಡಿ
ಸ್ವತಂತ್ರ ಅಭ್ಯರ್ಥಿ - ಜಯನಗರ ವಿಧಾನಸಭಾ ಕ್ಷೇತ್ರ
ಕರ್ನಾಟಕ

ಪ್ರತಿಗಳು: ದೆಹಲಿಯ ಮುಖ್ಯ ಚುನಾವಣಾ ಆಯುಕ್ತರಿಗೆ ಮತ್ತು ಮಾಧ್ಯಮಗಳಿಗೆ

1 comment:

Supreeth.K.S said...

ನಿಮ್ಮ ಧ್ವನಿಗೆ ನನ್ನ ಬೆಂಬಲವೂ ಇದೆ...