May 22, 2008

ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್

ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಬಂದ ಬಹುಪಾಲು ಅಭಿಪ್ರಾಯಗಳನ್ನು ಇತ್ತೀಚೆಗೆ ತಾನೆ ವೆಬ್‍ಸೈಟಿನಲ್ಲಿ ಹಾಕಿದ್ದೇನೆ. ಭಾರತದ ನನ್ನ ತಲೆಮಾರಿನ ತಲ್ಲಣ, ಆಶಾವಾದ, ಕನಸುಗಳು, ಆದರ್ಶಗಳು, ಸಿನಿಕತೆ, ಎಲ್ಲವೂ ಇಲ್ಲಿವೆ.
http://www.ravikrishnareddy.com/feedback.html

ಇದು ಪಯಣದ ಆರಂಭ. ಜೀವನ ಸಾರ್ಥಕ್ಯದ ಕ್ಷಣಗಳು ಈಗ ಆರಂಭವಾಗಿದೆ. ಒಂದಿಡೀ ತಿಂಗಳು ಮನಸ್ಸು ಎಲ್ಲಾ ತರಹದ ಗೊಂದಲ, ಗೊಜಲು, ಆಮಿಷ, ಒತ್ತಡ, ಮಮಕಾರ, ಆಸೆ, ಆಕಾಂಕ್ಷೆ, ಭಯಗಳಿಂದ ಮುಕ್ತವಾಗಿತ್ತು. ಬಹುಶಃ ಮೊದಲ ಬಾರಿಗೆ ಅನುಭವಿಸಿದ ಆತ್ಮತೃಪ್ತಿಯ ದಿನಗಳು ಅವು. ಸಂಪೂರ್ಣ ಆದರ್ಶದಲ್ಲಿ ನಡೆದುಕೊಂಡ ಕಾಲ. ಎಲ್ಲಿಯೂ ರಾಜಿಯಾಗಲಿಲ್ಲ. ಆತ್ಮಸಾಕ್ಷಿಗೊಪ್ಪದ್ದನ್ನು ಹೇಳಲಿಲ್ಲ, ಮಾಡಲಿಲ್ಲ.

ಇನ್ನೆರಡು ದಿನದಲ್ಲಿ ಕರ್ನಾಟಕದ ಚುನಾವಣಾ ಫಲಿತಾಂಶ ಬರಲಿದೆ. ಹತ್ತು ಲಕ್ಷದ ಮಿತಿಯೊಳಗೆ, ಕಾನೂನುಬದ್ಧವಾಗಿ ಚುನಾವಣೆ ನಡೆಸಿದ ಯಾರೊಬ್ಬರೂ ಗೆಲ್ಲುವ ಸೂಚನೆಗಳು ಇಲ್ಲ. ಕೆಲವು 'ಅತಿ ಬುದ್ಧಿವಂತರು' ಚುನಾವಣಾ ಆಯೋಗ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಅಲ್ಪಬುದ್ಧಿಗೆ, ಅಲ್ಪತೃಪ್ತಿಗೆ ಶರಣಾಗಿದ್ದಾರೆ. ಆದರೆ, ಕಾನೂನು ಜಾರಿ ಮಾಡಲಾಗದ ಚುನಾವಣಾ ಆಯೋಗವೆ ಈ ಕೆಟ್ಟ ರಾಜಕೀಯ ವ್ಯವಸ್ಥೆಯ ಮಹಾಪೋಷಕ. ಒಳ್ಳೆಯದಕ್ಕೆ ಬದಲಾಗುತ್ತಿರುವ ಮತ್ತು ಬಲವಾಗುತ್ತಿರುವ ಭಾರತದ ಕಾನೂನು ವ್ಯವಸ್ಥೆಯ ಪರ ನಾನೂ ಇದ್ದೇನೆ ಎಂಬ ಹುಸಿ ನಟನೆ ಆಯೋಗದ್ದು. ಅಭ್ಯರ್ಥಿಗಳು ಕೋಟಿಕೋಟಿ ಖರ್ಚು ಮಾಡಿ ಕೇವಲ ಒಂದೆರಡು ಲಕ್ಷಗಳ ಲೆಕ್ಕ ತೋರಿಸಿದರೂ ಆಯೋಗ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತದೆ ಎಂದರೆ, ಇದೊಂದು ಪ್ರಜಾಪ್ರಭುತ್ವ ಪರವಿಲ್ಲದ, ಕಾನೂನನ್ನು ಬಿಗಿಯಾಗಿ ಜಾರಿಗೊಳಿಸಲಾಗದ ಅಧಿಕಾರಿಗಳ ಕೂಟ. ಇದು ಬದಲಾಗಬೇಕು. ಆದರೆ ಇದನ್ನು ಸಾಧಿಸುವುದು ಹೇಗೆ?

ಇನ್ನು ಎರಡು ದಿನದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವೂ ಬರುವ ಸಾಧ್ಯತೆಗಳಿವೆ. ನಾನು ಚುನಾವಣಾ ಅಯೋಗಕ್ಕೆ ಕೊಟ್ಟಿರುವ ದೂರಿಗೆ ಇನ್ನೂ ಉತ್ತರ ಬಂದಿಲ್ಲ ಮತ್ತು ಅವರು ಮುಂದಕ್ಕೆ ಏನು ಮಾಡಲಿದ್ದಾರೆ ಎನ್ನುವ ಬಗ್ಗೆಯೂ ಗೊತ್ತಾಗುತ್ತಿಲ್ಲ. "ಮತಎಣಿಕೆ ಪ್ರಕ್ರಿಯೆಗೆ ಸ್ಟೇ ಆರ್ಡರ್ ತರಲು ಆಗುವುದಿಲ್ಲ, ಯಾವುದಕ್ಕೂ ಫಲಿತಾಂಶ ಬರುವ ತನಕ ಕಾಯಬೇಕು," ಎಂದು ವಕೀಲರು ಹೇಳುತ್ತಿದ್ದಾರೆ. ಕೇಸು ಹಾಕಲು ಕೆಲವು ದಾಖಲೆಗಳು ಬೇಕಾಗಿವೆ. ಆಯೋಗ ನಮಗೆ ಒದಗಿಸಬೇಕಾದ ದಾಖಲೆಗಳನ್ನು ಇನ್ನೂ ಒದಗಿಸಿಲ್ಲ. ಏನೇ ಇರಲಿ, ಒಂದು ಸುದೀರ್ಘವಾದ ಕಾನೂನು ಸಮರಕ್ಕೆ ಎಲ್ಲಾ ಸಜ್ಜಾಗುತ್ತಿದೆ. ಸದ್ಯದ ಗುರಿ, "ಜಯನಗರ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯುವಂತೆ ಮಾಡಬೇಕು ಮತ್ತು ಆಗ ಯಾವೊಬ್ಬ ಅಭ್ಯರ್ಥಿಯೂ ಹತ್ತು ಲಕ್ಷದ ಮಿತಿಗಿಂತ ಹೆಚ್ಚಿಗೆ ಖರ್ಚು ಮಾಡಬಾರದ ಕಾನೂನು ಜಾರಿಯಾಗುವಂತೆ ಮಾಡಬೇಕು," ಎನ್ನುವುದು. ಇದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲದೆ, ಇಡೀ ದೇಶದ ಕಾನೂನು ಉಲ್ಲಂಘಕ ಅನೈತಿಕ ರಾಜಕಾರಣಿಗಳಿಗೆ ಮತ್ತು ಭ್ರಷ್ಟ ವ್ಯವಸ್ಥೆಗೆ ಸ್ಪಷ್ಟ ಸಂದೇಶ ರವಾನಿಸುತ್ತದೆ ಮತ್ತು ಮೌಲ್ಯ ಮತ್ತು ನೈತಿಕತೆ ಇರುವ ಯೋಗ್ಯರು ಸಾರ್ವಜನಿಕ ಬದುಕಿಗೆ ಬರಲು ಪ್ರೇರೇಪಿಸುತ್ತದೆ. ಸದ್ಯದ ಫಲಿತಾಂಶ ಮತ್ತು ಕೇಸು ಏನೇ ಆಗಲಿ, ಅಂತಿಮ ಗುರಿ ಇದೇನೆ.

ಕಳೆದ ಎರಡು ದಿನಗಳಿಂದ ನನ್ನ ವೈಯಕ್ತಿಕ ಸರಹದ್ದಿನಲ್ಲಿ ಆಗುತ್ತಿರುವ ಘಟನೆಗಳ ರೂಪಕ ಹೀಗಿದೆ:

ನಾನದನ್ನು ಬಯಸಿರಲಿಲ್ಲ. ಆದರೆ, ಸಮಯ ಮತ್ತು ಸಂದರ್ಭ ನನ್ನ ಕೈಯ್ಯಲ್ಲಿ ರಿವಾಲ್ವರ್ ಇಟ್ಟಿದೆ. ಟ್ರಿಗರ್ ಒತ್ತಲೇಬೇಕಾದ ಅನಿವಾರ್ಯತೆಯನ್ನೂ ನಿರ್ಮಿಸಿದೆ. ಈ ರಿವಾಲ್ವರ್‍‌ನಲ್ಲಿ ಗುಂಡು ಇದೆಯೊ ಇಲ್ಲವೊ ನನಗೆ ಗೊತ್ತಿಲ್ಲ. ಪಿಸ್ತೂಲಿನ ಅತ್ತ ಇರುವವರಲ್ಲಿ ಕೆಲವರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಅದರಲ್ಲಿ ಅವರಿಗಷ್ಟೆ ತಗಲುವ ಬುಲೆಟ್ ಇದೆ ಎಂಬ ಭಯ. ನಾನಂತೂ ಟ್ರಿಗರ್ ಒತ್ತುತ್ತೇನೆ. ಅದು ಪಾಲಿಗೆ ಬಂದಿರುವ ಕರ್ತವ್ಯ. ಅತ್ತ ಕಡೆಯವರೆಲ್ಲರಿಗೂ ತಗಲುವ ಗುಂಡು ಇದರಲ್ಲಿ ಇದ್ದದ್ದೇ ಆದರೆ, ಆದರ್ಶ ರಾಜಕೀಯದ ಭವಿಷ್ಯ ನಿರ್ಮಾಣದ ಹೊಸ್ತಿಲಲ್ಲಿ ನಾವಿದ್ದೇವೆ.

1 comment:

ಕುಕೂಊ.. said...

ರವಿ ಕೃಷ್ಣ ರೆಡ್ಡಿಯವರೆ,

ನೀವು ಪ್ರಕಟಿಸುತ್ತಾ ಬಂದಿರುವ ವಿಚಾರಗಳನ್ನು ನಾನು ಓದುತ್ತಾ ಬಂದಿರುವೆ.
ನಿಮ್ಮ ನ್ಯಾಯಪರವಾದ ಬರಹಗಳು, ದೇಶದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ.
ಇಂದು ನಿಮ್ಮ ಬಹರವನ್ನು "ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್" ಓದುವಾಗ ನನಗೆ ಅನಿಸಿದ ಕೆಲವು ವಿಚಾರಗಳನ್ನ ಪ್ರತಿಕ್ರಿಯಸುತ್ತಿದ್ದೇನೆ. ನೀವು ಚುನಾವಣೆ ಆಯೋಗ ಮಾಡಿದ ಕಾನೂನು ಮತ್ತು ಅದರ ಆಡಳಿತ ದಕ್ಷತೆಯ ಬಗ್ಗೆ ಬರೆದಿರುವಿರಿ. ಇದಕ್ಕೆ ನನ್ನ ನಿಲುವು ಸ್ಪಷ್ಟವಾಗಿ ನಿಮ್ಮ ಮುಂದಿರಿಸುವೆ. ನನ್ನ ಬುದ್ಧಿ ಬೆಳದಾಗಿನಿಂದ , ಕಾನೂನು, ಸರಕಾರ, ಆಡಳಿತದ ಬಗ್ಗೆ ತಿಳುವಳಿಕೆ ಮೂಡಿದಾಗಿನಿಂದ ಸಿಕ್ಕ ಅನುಭವ ನನಗೆ ಒಂದು ವಿಚಿತ್ರ ಜಿಜ್ಞಾಸೆ ಹುಟ್ಟಿಸಿದೆ. ಈಗ ಭಾರತ ದೇಶ ನಡೆಸಿಕೊಂಡು ಹೋಗುತ್ತಿರುವ ಪ್ರಜಾತಂತ್ರ ಬರಿ ಹೆಸರಿಗೆ ಮಾತ್ರ ಪ್ರಜಾತಂತ್ರ. ನಾನು ಈ ಭಾರತಾಂಬೆಯ ಮೇಲೆ ಆಣೇ ಮಾಡಿ ಹೇಳುತ್ತೇನೆ ಈ ಪ್ರಜಾತಂತ್ರ ವ್ಯವಸ್ತೆಯಲ್ಲಿ ಯಾವತ್ತೂ ಯಾರಿಗೂ ನ್ಯಾಯ ಸಿಕ್ಕುವುದಿಲ್ಲ. ಯಾವ ಬಡವರಪರವಾಗಿ ಯಾವತ್ತು ಕೆಲಸ ಹಾಗುವುದಿಲ್ಲ. ಬರಿ ಲೆಕ್ಕ ಪತ್ರದಲ್ಲಿ, ಆಧುನಿಕ ಬಡಿವಾರದಲ್ಲಿ ತೋರಿಸಿ ಎಲ್ಲರನ್ನೂ ಮೋಸಹೋಗುವಂತೆ ಮಾಡುವ ಸುವ್ಯಸ್ತಿತವಾದ ಕುತಂತ್ರ. ಇದರಲ್ಲಿ ಆಡಳಿತ ಶಾಹಿ, ಅಧಿಕಾರ ಶಾಯಿಯ ಆಳವಾದ ವಿಷ ಬೇರುಗಳು ಹಬ್ಬಿವೆ. ಒಬ್ಬ ಹಳ್ಳಿಯ ಅಕೌಟೆಂಟ್ ನಿಂದ ಹಿಡಿದು ದಿಲ್ಲಿಯಲ್ಲಿ ಕೂತು ಆರ್ಥಿಕ ಹಾಗು ಆಡಳಿತಾತ್ಮಕ ರೂಪರೇಷೆಗಳನ್ನು ರಚಿಸುವ ಕಾರ್ಯದರ್ಶಿಗಳವರೆಗು ಅಧಿಕಾರ ವಿವಿದ ಹಂತದಲ್ಲಿ ಹಂಚಿಹೋಗಿದೆ. ಸಾಮಾನ್ಯ ಜನರಿಗೆ ಈ ಕಾನೂನು ಜಾಲದಿಂತ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ. ಅಷ್ಟು ವ್ಯವರಾತ್ಮಕವಾಗಿ ಈ ಕಾನೂನಿನ ಜಾಲ ನೇಯಲಾಗಿದೆ.

ಸಾಮಾನ್ಯ ಒಬ್ಬ ಪ್ರಜೆಗೂ ನ್ಯಾಯ ಸಿಗಬೇಕು ಅನ್ನುವ ಕಾನೂನೇನೋ ಇದೆ. ಆದರೆ ಸಾಮಾನ್ಯ ಮನುಷ್ಯ ಆ ನ್ಯಾಯದ ದಾರಿಯಲ್ಲಿ ಹೊರಟರೆ ಅವನಿಗೆ ಈ ನ್ಯಾಯಕ್ಕಿಂತ ತಾನು ಬಂದ ಕಷ್ಟವನ್ನು ಅನುಭವಿಸುವೆ ಲೇಸೆನ್ನುವಷ್ಟು ಕಾನೂನು ತೊಡಕುಗಳು ನಮ್ಮ ಪ್ರಜಾತಂತ್ರದಲ್ಲಿವೆ.
ಇದ್ದಕ್ಕೆ ಕಾರಣವೇನು? ನನ್ನ ಸ್ಪಷ್ಟ ಉತ್ತರ, ಬ್ರಿಟಿಷರಿಂದ ನಾನು ಬಳುವಳಿಯಾಗಿ ಪಡೆದ ಪ್ರಜಾತಂತ್ರ, ನ್ಯಾಯವ್ಯವಸ್ಥೆ, ಆರ್ಥಿಕ ನೀತಿ.
ಒಂದು ಸಣ್ಣ ಅಲ್ಪವಿರಾಮವನ್ನು ಬಿಡದೇ ನಾವು ಅವರ ಪ್ರಜಾತಂತ್ರ ವ್ಯವಸ್ಥೆಯನ್ನು ನಕಲು ಮಾಡಿ ಉಪಯೋಗಿಸುವುದೇ ಕಾರಣ. ಬ್ರಿಟೀಷರು ಮಾಡಿದ್ದ ಕಾನೂನು ವ್ಯವಸ್ಥೆ, ಪ್ರಜೆಗಳನ್ನು ಗುಲಾಮರನ್ನಾಗಿ ಇಟ್ಟುಕೊಳ್ಳಲಿಕ್ಕೆ ಅನುಕೂಲವಾದ ವ್ಯವಸ್ಥೆ. ತೆರಿಗೆ ಸುಲಿಯಲು ಅನುಕೂಲವಾದ ವ್ಯವಸ್ಥೆ. ಅಧಿಕಾರಿಗಳ ನಿಷ್ಠೆ ಸರಕಾರದ ಪರವಾಗಲು ಮಾಡಿದ ವ್ಯವಸ್ಥೆ. ಇದನ್ನು ಸರಿಪಡಿಸದೇ ವರೆತು ನಾವು ಭಾರತವನ್ನು ಬದಲಾಯಿಸುತ್ತೇವೆ ಎನ್ನುವುದು ನನಗೆ ಹಗಲು ಕನಸೇ ಅನ್ನಿಸುತ್ತಿದೆ. ಈಗಿರುವ ಕಾನೂನು ನಮ್ಮ ಭಾವನೆ, ಭೌಗೋಳಿಕ, ಪರಿಸರ, ಸಾಮಾಜಿಕ ಧಾರ್ಮಿಕ ವ್ಯವಸಸ್ಥೆಗೆ ಪೂರಕವಾಗಿಲ್ಲ. ಈಗಿರುವ ಕಾನೂನುಗಳೆಲ್ಲ ನಮ್ಮ ನಂಬಿಕೆಯ ವಿರುದ್ದವಾಗಿವೆ. ಹಾಗಾಗಿ ನಾಗರಿಕ ಸರಿಯಾಗಿ ಸ್ಪಂದಿಸಿ ಸಮಾಜ, ದೇಶಕಟ್ಟುವ ಕಾರ್ಯದಲ್ಲಿ ಭಾಗಿಯಾಗಲಾರ. ಪ್ರಜೆಯ ಉನ್ನತಿಯಾದೆ ಹೊರೆತು ದೇಶ ಉನ್ನತಿಯ ಕಲ್ಪನೆ ಬರಿ ಬೊಗಳೆ. ನಾವು ನಿಜವಾಗಲು ನಮ್ಮ ದೇಶವನ್ನು ಮೇಲೆತ್ತುವ ಪಣತೊಟ್ಟರೆ ಮೊದಲು ನಮ್ಮ ಕಾರ್ಯ ಈ ಪ್ರಜಾತಂತ್ರ ಬೇರು ಸಮೇತ ಕಿತ್ತಾಕುವುದರಿಂದ ಪ್ರಾರಂಬವಾಗಬೇಕು. ಭಾರತಕ್ಕೆ ಪೂರಕವಾದ ಪ್ರಜಾತಂತ್ರ ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಈ ವಿಷಯವಾಗಿ ಗಾಂಧಿಜಿಯವರು ತಮ್ಮ ಹಿಂದೂ ಸ್ವಾರಾಜ್ ಪುಸ್ತಕದಲ್ಲಿ ಸೂಕ್ಮವಾಗಿ ಮತ್ತು ಕೂಲಂಕುಷವಾಗಿ ವಿವರಿಸಿದ್ದಾರೆ. ಅಲ್ಲದೆ ಗಾಂಧಿಜಿ ಈಗಿರು ನಮ್ಮ ಪ್ರಜಾತಂತ್ರ ಆಡಳಿತ ಸೂತ್ರದ ಕಡು ವಿರೋಧಿಯಾಗಿದ್ದರು. ನೀವು ಗಾಂಧಿಜಿಯ ವಿಚಾರಧಾರೆಯನ್ನು ಮುಂದಿಟ್ಟು ನಡೆಯುವುದಾದರೆ ಈ ವಿಷಯವಾಗಿ ಒಮ್ಮೆ ನಿಮ್ಮ ಜಿಜ್ಞಾಸುವನ್ನು ಪರಮಾರ್ಶಿಸಿ ಕೊಳ್ಳಿ. ಈ ಪ್ರಜತಂತ್ರ ವ್ಯವಸ್ಥೆಯಲ್ಲಿ ಯಂತ ಧಕ್ಷ ಅಧಿಕಾರಿ, ನಿಷ್ಠೆಯುಳ್ಳ ನಾಗರಿಕರಿದಲೂ ಒಳ್ಳೆಯ ಆಡಳಿತ ನಿಡಲು ಸಾದ್ಯವೇ ಇಲ್ಲ. ಇದು ವಾಸ್ತವ ಸತ್ಯ. ಅಂತಹದರಲ್ಲಿ ಈ ಚುನಾವಣೆ ಅಧಿಕಾರಿಗಳು ಯಾವಲೆಕ್ಕ? ನಿಮ್ಮ ಅವರ ವಿರುದ್ದದ್ದ ಹೋರಾಟ ಬರಿ ತಾತ್ಕಾಲಿಕ ಆತ್ಮಸಂತೃಪ್ತಿ ತಂದು ಕೊಡಬಹುದೇ ವಿನಹ ನಿಜವಾದ ಜಯ ಸಿಕ್ಕದು.
ಅಲ್ಲದೆ ಭಾರತದ ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಹೋರಾಟಕ್ಕೆ ಮುನ್ನುಗ್ಗುವ ಸಾಮಾನ್ಯನ್ನು ನಿಮ್ಮ ಈ ಹೋರಾಟದಿಂದ ಹಾದಿತಪ್ಪಿದಂತಾಗುತ್ತದೆ. ಈ ತಪ್ಪು ಆಗದೆ ನಮ್ಮ ದೇಶಕ್ಕೆ ಜನ್ನಕ್ಕೆ ಒಳಿತನ್ನು ಉಂಟುಮಾಡುವ ದಾರಿಯಲ್ಲಿ ನಿಮ್ಮ ಹೋರಾಟ ನಡೆದರೆ ಮತ್ತೆ ಭಾರತ ವಿಶ್ವಮಾನ್ಯವಾಗುವುದು.

ವಂದೇಮಾತರಂ
ಜೈಹಿಂದು

ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ.
30/05/08