Aug 7, 2008

ಭಾರತೀಯ ಮೂಲದ ಜನಾಂಗವೊಂದರ ವಿರುದ್ಧ ಯೂರೋಪಿನಲ್ಲಿ ತಾರತಮ್ಯ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 15, 2008 ರ ಸಂಚಿಕೆಯಲ್ಲಿನ ಲೇಖನ.)

ಅದು 17 ನೇ ಶತಮಾನದ ಇಂಗ್ಲೆಂಡ್. ಅಂತರ್ಯುದ್ಧದ ಮುಖಾಂತರ ಅರೆಬರೆ ಪ್ರಜಾತಂತ್ರದಿಂದ ಪೂರ್ಣಮಟ್ಟದ ಪ್ರಜಾಪ್ರಭುತ್ವದತ್ತ ಇಂಗ್ಲೆಂಡ್ ಹೊರಳಿದ ಸಮಯ. ಕೆಲವು ಮತೀಯ ಮತ್ತು ರಾಜಕೀಯ ಕಾರಣಗಳಿಂದಾಗಿ ಆರಂಭವಾದ ಆ ಯುದ್ಧ ಆಗಿನ ದೊರೆ ಮೊದಲ ಚಾರ್ಲ್ಸ್‌ನ ಬಹಿರಂಗ ಶಿರಚ್ಚೇದನವನ್ನೇ ಕೇಳಿತು. ದೊರೆಗೆ ಎದುರಾಗಿ ನಿಂತವನು ಆಲಿವರ್ ಕ್ರಾಮ್‌ವೆಲ್ ಎಂಬ ಪ್ರಜಾತಂತ್ರ ಮತ್ತು ಪ್ರಜಾಹಕ್ಕುಗಳ ಪರ ಇದ್ದ ಶ್ರೀಮಂತ ಜಮೀನುದಾರ. ಎಲ್ಲಾ ಅಂತರ್ಯುದ್ಧಗಳಲ್ಲಿ ಆಗುವಂತೆ ಆ ಸಮಯದಲ್ಲಿಯೂ ದೇಶದಲ್ಲಿನ ಎಲ್ಲಾ ತರಹದ ಪ್ರಜೆಗಳು ಅಪಾರವಾದ ಕಷ್ಟನಷ್ಟಗಳಿಗೆ ಈಡಾದರು. ವಿಶೇಷವಾಗಿ, ದೊರೆಯ ಪರ ಇದ್ದ ಅನೇಕ ಜಮೀನುದಾರುಗಳ ಮತ್ತವರ ಕುಟುಂಬಗಳ ಹತ್ಯೆಯಾಯಿತು. ಅವರ ಮನೆಗಳಿಗೆ ಬೆಂಕಿ ಇಟ್ಟರು. ಅನೇಕರು ತಲೆಮರೆಸಿಕೊಂಡು ಓಡಿಹೋಗಿ ಜೀವ ಉಳಿಸಿಕೊಂಡರು. ಈ ಇತಿಹಾಸದ ಹಿನ್ನೆಲೆಯಲ್ಲಿ, ದೊರೆಯ ಪರವಾಗಿ ಹೋರಾಡಿ ಮಡಿದ ತಂದೆ, ಆ ಸುದ್ದಿ ಕೇಳಿ ಕುಸಿದುಬಿದ್ದು ಸತ್ತ ತಾಯಿ, ತಮ್ಮನ್ನೆಲ್ಲ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕಲು ಪ್ರಯತ್ನಿಸಿದ ವಿರೋಧಿ ಗುಂಪು, ಅದರಿಂದ ಬಚಾವಾಗಿ ತಮ್ಮ ಹಳೆಯ ನಂಬಿಕಸ್ಥ ಸೇವಕನ ಮನೆಯಲ್ಲಿ ವ್ಯವಸಾಯ ಮಾಡುತ್ತ ಬೆಳೆಯುವ 10-15 ವರ್ಷ ವಯಸ್ಸಿನ ಇಬ್ಬರು ಸೋದರರ ಮತ್ತು ಅವರ ಸೋದರಿಯರ ಕತೆಯನ್ನು ಫ್ರೆಡರಿಕ್ ಮ್ಯಾರಿಯಟ್ ಎನ್ನುವ ಲೇಖಕ ಅದ್ಭುತವಾಗಿ ಬರೆದಿದ್ದಾನೆ. ಅದನ್ನು ಈಗಿನ ಲಕ್ಷಾಂತರ ಕನ್ನಡಿಗರು ಓದಿಯೂ ಇದ್ದಾರೆ. ಹೇಗೆಂದರೆ, ಆ ಕಾದಂಬರಿಯನ್ನು ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ "ಬನದ ಮಕ್ಕಳು" ಹೆಸರಿನಲ್ಲಿ ಅನುವಾದ ಮಾಡಿದ್ದಾರೆ ಮತ್ತು ಅದನ್ನು ಎರಡು ದಶಕಗಳ ಹಿಂದೆ ಪಿಯುಸಿಗೊ ಅಥವ ಬೆಂಗಳೂರು ವಿಶ್ವವಿದ್ಯಾಲಯದ ಪದವಿಗೊ ಪಠ್ಯವಾಗಿ ಮಾಡಲಾಗಿತ್ತು.

ಹೈಸ್ಕೂಲು ದಿನಗಳಲ್ಲಿ ನನ್ನನ್ನು ಅಪಾರವಾಗಿ ಸೆಳೆದ, ರೋಮಾಂಚಕಾರಿಯಾದ, ಕಾಡಿನಲ್ಲಿ ಬೆಳೆದ ಹದಿಹರೆಯದ ಹುಡುಗರ ಸಾಹಸ, ಬೇಟೆ, ತ್ಯಾಗ, ಕುಟುಂಬಪ್ರೇಮ, ಯೌವ್ವನದ ಪ್ರೀತಿ, ಮತ್ತು ಯುದ್ಧಭೂಮಿಯ ಘಟನೆಗಳನ್ನೊಳಗೊಂಡ ಕಾದಂಬರಿ ಇದು. ಆ ಕಾದಂಬರಿಯ ಎಡ್ವರ್ಡ್ ಮತ್ತು ಹಂಫ್ರಿ ಸೋದರರಂತೆ ನನ್ನ ಮನಸ್ಸನ್ನು ಸೆಳೆದ ಪಾತ್ರ ಪ್ಯಾಬ್ಲೊ ಎಂಬ ಜಿಪ್ಸಿಯದು.

ಯಾರಿವರು ಈ ಜಿಪ್ಸಿಗಳು? ಯೂರೋಪಿನ ಮತ್ತು ಅಮೆರಿಕದ ಅನೇಕ ವಿಶ್ವಪ್ರಸಿದ್ದ ಕತೆಕಾದಂಬರಿಗಳಲ್ಲಿ ಬರುತ್ತಾರಲ್ಲ? ಪ್ರಸಿದ್ಧ ಫ್ರೆಂಚ್ ಸಾಹಿತಿ ವಿಕ್ಟರ್ ಹ್ಯೂಗೋನ "ನೋಟ್ರ ಡಾಮ್‌ನ ಗೂನುಬೆನ್ನಿನವ" ಕಾದಂಬರಿಯಲ್ಲಿ ಬರುವ ಸುಂದರಿ ಕ್ಯುಸೆಂಡ್ರಳೂ ಜಿಪ್ಸಿ ಯುವತಿ. ಮತ್ತೊಂದು ವಿಶ್ವಪ್ರಸಿದ್ಧ ಸ್ಪ್ಯಾನಿಶ್ ಸಾಹಿತಿ ಮಾರ್ಕ್ವೆಜ್‌ನ "ಒಂದು ನೂರು ವರ್ಷಗಳ ಏಕಾಂತ" ದಲ್ಲಿ ಬರುವ ಹಲವಾರು ಪಾತ್ರಗಳೂ ಜಿಪ್ಸೀಗಳೆ.

ಕಳೆದ ಏಳೆಂಟು ಶತಮಾನಗಳಿಂದ ಯೂರೋಪಿನ ಅನೇಕ ದೇಶಗಳಲ್ಲಿ ಕಂಡುಬರುವ, ಚಮತ್ಕಾರಿಕ ಟ್ರಿಕ್‌ಗಳನ್ನು, ಮ್ಯಾಜಿಕ್‌ಗಳನ್ನು ಮಾಡುತ್ತ, ಗುಂಪುಗುಂಪಾಗಿ ಅಲೆದಾಡುವ ಕಂದುಬಣ್ಣದ ಅಲೆಮಾರಿ ಜನಾಂಗವೆ ಜಿಪ್ಸಿಗಳು. ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲ್ಪಡುವ ಇವರನ್ನು ಸಾಮಾನ್ಯವಾಗಿ ಗುರುತಿಸುವುದು ರೋಮಾ ಜಿಪ್ಸೀಗಳು ಎಂದು. ಸ್ವಲ್ಪ ಈಜಿಪ್ಟ್‌ನವರಂತೆ ಕಾಣುತ್ತಿದ್ದುದ್ದರಿಂದ ಇಜಿಪ್ಸೀಯರು, ಜಿಪ್ಸಿಗಳು ಎಂದಾಯಿತು ಎನ್ನುತ್ತಾರೆ ಕೆಲವರು. ಶತಮಾನಗಳ ಕಾಲ ಇವರು ಯಾರು ಮತ್ತು ಯೂರೋಪಿಗೆ ಎಲ್ಲಿಂದ ಬಂದರು ಎನ್ನುವುದು ಅಷ್ಟು ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಒಬ್ಬ ಭಾಷಾಶಾಸ್ತ್ರಜ್ಞ ಜಿಪ್ಸಿಗಳ ರೊಮಾನಿ ಭಾಷೆಗೂ ಮತ್ತು ಕೆಲವು ಭಾರತೀಯ ಭಾಷೆಗಳಿಗೂ ಇದ್ದ ಸಾಮ್ಯತೆಗಳನ್ನು ಗಮನಿಸಿ, ಇವರು ಭಾರತೀಯ ಮೂಲದವರಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ.

"ನಪುಂಸಕತೆ" ಕಳೆದುಕೊಂಡ ಭಾಷೆಗಳು !?
ಆ ಭಾಷಾಶಸ್ತ್ರಜ್ಞ ತನ್ನ ಸಂಶೋಧನೆಯಲ್ಲಿ ಕಂಡುಕೊಂಡ ಆಧಾರವಾದರೂ ಎಂತಹುದು ನೋಡಿ: ಅದು ಆ ಭಾಷೆಗಳಲ್ಲಿ ಇಲ್ಲದ ನಪುಂಸಕ ಲಿಂಗ! ಈಗ ನಮ್ಮ ಕನ್ನಡದ ಉದಾಹರಣೆಯನ್ನೇ ತೆಗೆದುಕೊಳ್ಳೋಣ; ಹುಡುಗ ಬಂದನು, ಹುಡುಗಿ ಬಂದಳು, ಅದು ಬಂದಿತು - ಹೀಗೆ ನಮ್ಮಲ್ಲಿ ಮೂರು ಲಿಂಗಭೇದಗಳಿವೆ. ಇದು ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊದಲಿಗೆ ಸಾಮಾನ್ಯವಾಗಿತ್ತು. ಆದರೆ, ಉತ್ತರ ಭಾರತದ ಕೆಲವು ಭಾಷೆಗಳು ಸುಮಾರು ಸಾವಿರ ವರ್ಷಗಳ ಹಿಂದೆ ಈ ನಪುಂಸಕ ಲಿಂಗವನ್ನು ಕಳೆದುಕೊಳ್ಳಲು ಆರಂಭಿಸಿದವು. ಬಹುಪಾಲು ನಪುಂಸಕ ಲಿಂಗ ಪದಗಳು ಪುಲ್ಲಿಂಗವಾಗಿ ಬದಲಾದರೆ ಕೆಲವಾರು ಮಾತ್ರ ಸ್ತ್ರೀಲಿಂಗವಾದವು. ರೋಮಾ ಜಿಪ್ಸೀಗಳ ಭಾಷೆಯಲ್ಲೂ ನಪುಂಸಕ ಲಿಂಗವಿಲ್ಲ. ಹಾಗಾಗಿ ಇವರ ಭಾಷೆ ಭಾರತದಲ್ಲಿಯೇ ಹುಟ್ಟಿರಬೇಕು ಮತ್ತು ಅವರ ವಲಸೆ ಭಾರತೀಯ ಭಾಷೆಗಳು ನಪುಂಸಕ ಲಿಂಗ ಕಳೆದುಕೊಂಡ ಹತ್ತನೆ ಶತಮಾನದಿಂದೀಚೆಗೆಯೇ ಆಗಿರಬೇಕು ಎನ್ನುವ ಅಭಿಪ್ರಾಯಗಳು ಭಾಷಾ ಅಧ್ಯಯನದಿಂದ ಹೊರಬಿತ್ತು.

ಆದರೆ, ಇದು ಕೇವಲ ಭಾಷಾ ಅಧ್ಯಯನದಿಂದ ಮಾತ್ರ ಹೊರಬಂದ ಅಭಿಪ್ರಾಯಗಳು. ಭಾಷೆ ಒಂದು ರೀತಿ ಜಂಗಮವಾದ್ದರಿಂದ ಮತ್ತು ಈ ಜನಾಂಗವೂ ಅಲೆಮಾರಿ ಜಂಗಮ ಜನಾಂಗವಾದ್ದರಿಂದ ಇದಿಷ್ಟೇ ಪುರಾವೆ ಇವರು ಭಾರತೀಯ ಮೂಲದವರು ಎಂದು ಖಡಾಖಂಡಿತವಾಗಿ ಸಾಬೀತು ಮಾಡುವುದಿಲ್ಲವಲ್ಲ? ಹಾಗೆ ಅದು ಸಾಬೀತಾದದ್ದು ಮಾತ್ರ ತೀರಾ ಇತ್ತೀಚಿಗೆ; ಅದೂ 1990 ರಿಂದೀಚೆಗೆ. ಅದೂ ಹೇಗೆಂದರೆ, ಈ ಜಿಪ್ಸೀಗಳಿಗೆ ಬರುವ ಕೆಲವು ಕಾಯಿಲೆ ಮತ್ತು ಡಿಎನ್‌ಎ ಪುರಾವೆಗಳಿಂದ. ಯೂರೋಪು, ಅಮೆರಿಕಗಳಲ್ಲೆಲ್ಲ ಹರಡಿರುವ ಜಿಪ್ಸೀಗಳಿಗೆ ಒಂದು ರೀತಿಯ ಸ್ನಾಯು ದೌರ್ಬಲ್ಯದ ಕಾಯಿಲೆ ಬರುತ್ತದೆ. ಈ ವಿಶಿಷ್ಟ ಕಾಯಿಲೆ ಭಾರತೀಯ ಮೂಲದ ಜನರಿಗೆ ಬಿಟ್ಟರೆ ಬೇರೆಯವರಿಗೆ ಬರುವುದಿಲ್ಲ. ಹಾಗೆಯೆ, ಬಹುಪಾಲು ಜಿಪ್ಸಿಗಳಲ್ಲಿರುವ ಒಂದು ಬಗೆಯ ಕ್ರೋಮೊಸೋಮ್ ಮತ್ತು ಮೈಟೊಕಾಂಡ್ರಿಯಲ್ ಡಿಎನ್‌ಎ ಭಾರತದ ಉಪಖಂಡದವರಲ್ಲಿ ಮಾತ್ರ ಕಂಡುಬರುತ್ತದೆ.

ಹಾಗಾದರೆ ನಮ್ಮ ದೇಶದಲ್ಲಿ ಈ ಜಿಪ್ಸೀಗಳ ಪೂರ್ವಜರು ಯಾರು? ಭಾರತದಲ್ಲಿ ಈಗಲೂ ಕೆಲವು ಕಡೆ ಬಡತನದಿಂದಾಗಿ ಗುಂಪುಗುಂಪುಗಳಾಗಿ ಸಂಚರಿಸುವ ರಾಜಸ್ಥಾನ ಮೂಲದ ಬಂಜಾರರು ಅಥವ ಲಂಬಾಣಿಗಳೆ ಈ ಜಿಪ್ಸೀಗಳ ಪೂರ್ವಜರು!

ಇವರು ಭಾರತೀಯ ಮೂಲದವರು ಎನ್ನುವುದು ವೈಜ್ಞಾನಿಕವಾಗಿ ಖಚಿತವಾದರೂ, ಇಲ್ಲಿಂದ ಯೂರೋಪಿಗೆ ಹೇಗೆ ಹೋದರು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಹತ್ತನೆ ಶತಮಾನದಲ್ಲಿ ಇರಾನಿನ ಘಜ್ನಿ ಮೊಹಮ್ಮದ್ ಸುಮಾರು ಐದು ಲಕ್ಷ ಹಿಂದುಗಳನ್ನು ಗುಲಾಮರನ್ನಾಗಿ ತನ್ನ ದೇಶಕ್ಕೆ ಎಳೆದುಕೊಂಡು ಹೋದ; ಇವತ್ತಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ದುರ್ಗಮ ಬೆಟ್ಟಗಳಲ್ಲಿ ಇವರನ್ನು ಎಳೆದುಕೊಂಡು ಹೋಗುವಾಗ ಅನೇಕ ಸಾವುನೋವುಗಳಾದವು; ಹಾಗಾಗಿಯೆ ಆ ಬೆಟ್ಟಗಳಿಗೆ ಹಿಂದುಕುಷ್ ಪರ್ವತಗಳು ಎಂಬ ಹೆಸರು ಬಂದಿದ್ದು; ಹಾಗೆ ದಾಳಿಕೋರರು ಎಳೆದುಕೊಂಡು ಹೋದ ಭಾರತೀಯರೆ ಜಿಪ್ಸೀಗಳು ಎನ್ನುತ್ತಾರೆ ಕೆಲವು ಇತಿಹಾಸತಜ್ಞರು. ಮತ್ತೆ ಕೆಲವರು, ಈ ಜಿಪ್ಸೀಗಳು ಕೆಳಜಾತಿಯ ಹಿಂದೂಗಳಾಗಿದ್ದರು; ಇಸ್ಲಾಮಿನ ಆಕ್ರಮಣವನ್ನು ತಡೆಯಲು ಇವರನ್ನು ಸೈನ್ಯಕ್ಕೆ ಸೇರಿಸಿ, ಕ್ಷತ್ರಿಯ ಜಾತಿಗೆ ಬಡ್ತಿ ನೀಡಿ, ಮುಸ್ಲಿಮ್ ದಾಳಿಕೋರರ ವಿರುದ್ಧ ಹೋರಾಡಲು ಪಶ್ಚಿಮಕ್ಕೆ ಕಳುಹಿಸಲಾಯಿತು, ಎನ್ನುತ್ತಾರೆ. ಅವರು ಯಾವುದೆ ಕಾರಣದಿಂದ ಹೊರಹೋಗಿದ್ದರೂ, ಭಾರತದಿಂದ ಹೋದ ನಂತರ ಅವರಿಗೆ ಇಲ್ಲಿನ ಸಂಪರ್ಕ ಸಂಪೂರ್ಣ ಕಳಚಿಹೋಗಿ, ನಂತರ ಅವರು ಒಂದು ವಿಭಿನ್ನ ಗುಂಪಾಗಿ ಯೂರೋಪಿನಲ್ಲಿ ತಲೆಯೆತ್ತಿದ್ದು ಮಾತ್ರ ನಿಜ.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಹಂಚಿಹೋಗಿರುವ ಈ ಜನಾಂಗ ಕಳೆದ ಶತಮಾನದಲ್ಲಂತೂ ಯೂರೋಪಿನಲ್ಲಿ ಅನೇಕ ರೀತಿಯ ಜನಾಂಗದ್ವೇಷಕ್ಕೆ ಮತ್ತು ತಾರತಮ್ಯಕ್ಕೆ ಈಡಾಗಿತ್ತು. ಕೆಲವು ಕಮ್ಯುನಿಸ್ಟ್ ದೇಶಗಳೊಂದಿಗೆ ಪ್ರಜಾಪ್ರಭುತ್ವ ದೇಶಗಳೂ ಸಹ ತಮ್ಮ ದೇಶಗಳಲ್ಲಿ ಇವರ ಸಂಖ್ಯೆ ಕಡಿಮೆ ಮಾಡಲು ಸಂಜಯಗಾಂಧಿಯ "ನರ ಕಟ್" ಕಾರ್ಯಕ್ರಮವನ್ನು ಚಾಲ್ತಿಯಲ್ಲಿಟ್ಟಿದ್ದವು. "ಪರಿಶುದ್ಧ ಆರ್ಯ" ಜನಾಂಗವನ್ನು ಮಾತ್ರ ಭೂಮಿಯ ಮೇಲೆ ಉಳಿಸಲು ಮನಸ್ಸು ಮಾಡಿದ್ದ ದುಷ್ಟ ಹಿಟ್ಲರ್ ಯಹೂದಿಗಳ ಜೊತೆಜೊತೆಗೆ ಜಿಪ್ಸೀಗಳನ್ನೂ ಘೆಟ್ಟೋಗಳಲ್ಲಿ ಕೂಡಿಹಾಕಿ ಕೊಂದಿದ್ದ. ನಾಟ್ಜೀಗಳ ಜನಾಂಗದ್ವೇಷಕ್ಕೆ ಸುಮಾರು ಹತ್ತು-ಹದಿನೈದು ಲಕ್ಷ ಜಿಪ್ಸಿಗಳು ಬಲಿಯಾಗಿದ್ದಾರೆ ಎಂದು ಒಂದು ಅಂದಾಜು.

ರೊಮಾ ನಗರವನ್ನು ರಾಜಧಾನಿಯಾಗಿ ಹೊಂದಿರುವ ಈಗಿನ ಇಟಲಿಯಲ್ಲಿ ಸುಮಾರು ಒಂದೂವರೆ ಲಕ್ಷ ರೋಮಾ ಜಿಪ್ಸೀಗಳಿದ್ದಾರೆ ಎಂದು ಅಂದಾಜು. ಬಡವರೂ, ಅಲೆಮಾರಿಗಳೂ, ಮತ್ತು ಅವರಿಗೆಂದೇ ಇರುವ ಕ್ಯಾಂಪ್‌ಗಳಲ್ಲಿ ವಾಸಿಸುವ ಈ ಜನರು ಇನ್ನೂ ಯೂರೋಪಿನ ಮುಖ್ಯವಾಹಿನಿಯಲ್ಲಿ ಬೆರೆಯಲಾಗಿಲ್ಲ. ಈಗ ಇಟಲಿಯಲ್ಲಿ ಈ ಇಡೀ ಜನಾಂಗದವರ ಫಿಂಗರ್‌ಪ್ರಿಂಟ್ ಶೇಖರಿಸುವುದರಲ್ಲಿ ಅಲ್ಲಿನ ಸರ್ಕಾರ ತೊಡಗಿದೆ. ಕಾರಣ? ಈ ಜನಾಂಗದವರು ಮಾಡುವ ಕ್ರಿಮಿನಲ್ ಕೃತ್ಯಗಳನ್ನು ತಡೆಯುವುದು.


ಲೇಖನದ ವಿಡಿಯೊ ಪ್ರಸ್ತುತಿ


ಹೀಗೆ ಫಿಂಗರ್‌ಪ್ರಿಂಟ್ ಮಾಡುವುದರಿಂದ ಏನಾಗುತ್ತದೆ ಎಂದರೆ, ಈ ಜಿಪ್ಸೀಗಳಲ್ಲಿಯ ಯಾರಾದರೂ ಯಾವುದಾದರೂ ಒಂದು ಕಳ್ಳತನ-ಸುಲಿಗೆ-ಕೊಲೆಯಂತಹ ಅಪರಾಧವನ್ನು ಮಾಡಿ ತಮ್ಮ ಬೆರಳಚ್ಚನ್ನು ಘಟನೆ ನಡೆದ ಸ್ಥಳದಲ್ಲಿ ಬಿಟ್ಟುಹೋಗಿದ್ದರೆ, ಅಪರಾಧ ಯಾರು ಮಾಡಿದ್ದಾರೆ ಎನ್ನುವುದನ್ನು ಕಂಡುಹಿಡಿಯುವುದು ಪೋಲಿಸರಿಗೆ ನಿಮಿಷಗಳ ಮಾತ್ರದ ಕೆಲಸ. ಕಂಪ್ಯೂಟರ್ ಮುಂದೆ ಕುಳಿತು, ಘಟನಾ ಸ್ಥಳದಲ್ಲಿ ದೊರೆತಿರುವ ಈ ಬೆರಳಚ್ಚು ಜಿಪ್ಸಿಯದೆ ಎಂಬ ಒಂದು ಪ್ರಶ್ನೆಯನ್ನು ಅದಕ್ಕೆ ಕೇಳಿದರಾಯಿತು. ಅದು ತನ್ನ ಡೇಟಾಬೇಸ್‌ನಲ್ಲಿರುವ ಒಂದೂವರೆ ಲಕ್ಷ ಜಿಪ್ಸೀಗಳ ಬೆರಳಚ್ಚನ್ನೂ ನಿಮಿಷಗಳಲ್ಲಿ ತುಲನೆ ಮಾಡಿ ಆತನ ವಿವರವಿಳಾಸಗಳೊಂದಿಗೆ ತೋರಿಸಿಬಿಡುತ್ತದೆ. ಇದು ಒಳ್ಳೆಯದೆ ಅಲ್ಲವೆ, ಇದರಿಂದ ಏನು ತಪ್ಪು ಎಂದು ಕೆಲವರು ಕೇಳಬಹುದು. ಸಮಸ್ಯೆ ಅಥವ ತಾರತಮ್ಯ ಇರುವುದೇ ಇಲ್ಲಿ. ಇಟಲಿಯ ಇನ್ಯಾವುದೇ ಪ್ರಜೆ ಅಂತಹ ಕೃತ್ಯ ಎಸಗಿದ್ದರೆ ಅವನ ಪತ್ತೆಗಾಗಿ ತಮ್ಮ ಮಾಮೂಲಿ ಪಾರಂಪರಿಕ ತನಿಖಾಕಾರ್ಯಗಳನ್ನು ಮಾಡಬೇಕಾದ ಪೋಲಿಸರು ಜಿಪ್ಸೀಗಳಿಗಾದರೆ ಅದನ್ನು ಮಾಡಬೇಕಿಲ್ಲ. ಒಂದೇ ದೇಶದಲ್ಲಿ ಹುಟ್ಟಿದ, ನೂರಾರು ವರ್ಷಗಳಿಂದ ಆ ನೆಲದಲ್ಲಿ ಓಡಾಡಿದ ಪೂರ್ವಜರಿರುವ, ಇತರರಷ್ಟೇ ಸಮಾನ ನಾಗರಿಕ ಹಕ್ಕುಗಳಿರುವ ಪ್ರಜೆಗಳ ನಡುವೆ ಮಾಡುವ ತಾರತಮ್ಯ ಇದು. ಇದು ಸಿದ್ಧಾಂತದ ಪ್ರಶ್ನೆ; ನ್ಯಾಯದ ಪ್ರಶ್ನೆ; ನೀತಿಯ ಪ್ರಶ್ನೆ; ಮಾನವೀಯತೆಯ ಪ್ರಶ್ನೆ. ಒಂದೇ ದೇಶದಲ್ಲಿ ಹುಟ್ಟಿದವರ ಸಮಾನ ಹಕ್ಕುಗಳ ಪ್ರಶ್ನೆ.

ಕಳೆದ ತಿಂಗಳು ವಿಶ್ವಸಮುದಾಯದಲ್ಲಿ ಇಟಲಿ ಸುದ್ದಿ ಮಾಡಿದ್ದು ಇದೇ ಕಾರಣಕ್ಕೆ. ತನ್ನದೇ ಸದಸ್ಯ ರಾಷ್ಟ್ರವಾದ ಇಟಲಿಯ ಈ ಕೃತ್ಯವನ್ನು ಯೂರೋಪಿಯನ್ ಯೂನಿಯನ್‌ನ ಪಾರ್ಲಿಮೆಂಟ್ ಖಚಿತ ಮಾತುಗಳಲ್ಲಿ ಖಂಡಿಸಿತು. ಇಟಲಿಯಲ್ಲಿ ಮತ್ತೆ ತಲೆ ಎತ್ತುತ್ತಿರುವ ಫ್ಯಾಸಿಸ್ಟ್ ನೀತಿಯ ಪುರಾವೆ ಇದು ಎಂದರು ಅಲ್ಲಿಯ ಕೆಲವರು. ಯೂರೋಪಿನಲ್ಲಿ ಚಿಗುರೊಡೆಯುತ್ತಿರುವ ರೇಸಿಸಮ್‌ನ ಕುರುಹು ಇದು ಎಂದರು. ಇದೇ ಸಮಯದಲ್ಲಿ ಇನ್ನೂ ಒಂದು ಘಟನೆ ನಡೆಯಿತು. ಎರಡು ವಾರದ ಹಿಂದೆ ಇಟಲಿಯ ಬೀಚೊಂದರಲ್ಲಿ ಇಬ್ಬರು ಜಿಪ್ಸಿ ಹುಡುಗಿಯರು ನೀರಾಟ ಆಡುತ್ತ ಸಮುದ್ರದ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡರು. ನಂತರ ಅವರ ಶವಗಳನ್ನು ಮೇಲಕ್ಕೆತ್ತಿ ಮರಳಿನ ಮೇಲೆ ಸ್ವಲ್ಪಕಾಲ ಮಲಗಿಸಲಾಯಿತು. ಆ ಸಮಯದಲ್ಲಿ ಕೆಲವು ಬಿಳಿಯ ಇಟಾಲಿಯನ್ನರು ಶವಗಳಿಂದ ಅನತಿ ದೂರದಲ್ಲಿ ತಮ್ಮ ಪಾಡಿಗೆ ತಾವು ಸೂರ್ಯಸ್ನಾನ ಮಾಡುತ್ತ, ವಿರಾಮದ ಮೋಜು ಅನುಭವಿಸುತ್ತ, ಏನೂ ಆಗಿಯೆ ಇಲ್ಲವಂತೆ ಕುಳಿತಿದ್ದರು. ಅವರ ಈ ವರ್ತನೆಯ ಫೋಟೋಗಳು ಮಾರನೆ ದಿನ ಇಟಲಿಯ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಇಟಲಿಯ ಸಜ್ಜನರು ಸಿಡಿದೆದ್ದರು. ಉಗ್ರಮಾತುಗಳಲ್ಲಿ ತಮ್ಮದೇ ಜನರ ವರ್ತನೆಯನ್ನು ಖಂಡಿಸಿದರು. ಇಟಲಿ ಈಗ ಅಂತಃಸಾಕ್ಷಿಯ ಪ್ರಶ್ನೋತ್ತರದಲ್ಲಿ ತೊಡಗಿಕೊಂಡಿದೆ. ಇವು ಅಲ್ಲಿಯ ತಲ್ಲಣಗಳು... ಭಾರತೀಯ ಮೂಲದ ವಿಶ್ವಜನಾಂಗವೊಂದು ಇನ್ನೂ ಅನುಭವಿಸುತ್ತಿರುವ ತಾರತಮ್ಯಗಳು...

ತಾರತಮ್ಯಗಳ ಬಗ್ಗೆ ಮಾತನಾಡಲು ನಮಗ್ಯಾವ ಹಕ್ಕಿದೆ?
ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಇಂತಹ ತಾರತಮ್ಯಗಳನ್ನು ಖಂಡಿಸುವ ಅಭಿಪ್ರಾಯವನ್ನು ಈ ಲೇಖನದಲ್ಲಿ ಬಿಂಬಿಸಬೇಕೊ ಬೇಡವೊ ಎನ್ನುವ ಗೊಂದಲದಲ್ಲಿ ಇದ್ದೇನೆ ನಾನು. ಅದು ತಾರತಮ್ಯಗಳು ಸರಿತಪ್ಪು ಎನ್ನುವ ಗೊಂದಲದಿಂದ ಬಂದಿದ್ದಲ್ಲ. ಅದು ನನಗಾಗಲಿ, ಅಥವ ಮತ್ಯಾವುದೇ ಕನ್ನಡ ಬರಹಗಾರನಿಗಾಗಲಿ ಇಂತಹ ಜನಾಂಗದ್ವೇಷವನ್ನಾಗಲಿ, ತಾರತಮ್ಯವನ್ನಾಗಲಿ ಖಂಡಿಸಲು ಯಾವ ಅರ್ಹತೆ ಇದೆ ಎನ್ನುವ ಸ್ವಪ್ರಶ್ನೆಯಿಂದ ಬಂದದ್ದು. ಅದಕ್ಕೆ ಕಾರಣ ನನ್ನ ಕಂಪ್ಯೂಟರ್‌ನ ಪರದೆಯಿಂದ ಕಣ್ಣುಕುಕ್ಕುತ್ತಿರುವ ಒಂದೇ ದಿನದಲ್ಲಿ ಪ್ರಕಟಗೊಂಡ ಎರಡು ಪತ್ರಿಕಾ ವರದಿಗಳು.
ಪ್ರಜಾವಾಣಿಯ ವರದಿಯೊಂದರ ಪ್ರಕಾರ, 1991 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ 11 ಜನ ದಲಿತರ ಸಜೀವದಹನ ಮಾಡಿದ ಘಟನೆಯ ಪ್ರಮುಖ ಆರೋಪಿಯನ್ನು ಈಗ ಬಂಧಿಸಲಾಗಿದೆಯಂತೆ. ಜನಾಂಗದ್ವೇಷದಿಂದ ತನ್ನದೇ ಊರಿನವರನ್ನು ಸುಟ್ಟ ಮನುಷ್ಯ ಇಲ್ಲಿಯವರೆಗೂ ಪೋಲಿಸರಿಗೆ ಸಿಕ್ಕಿರಲಿಲ್ಲ. ಆದರೆ ಅದೇ ಊರಿನ ಸುತ್ತಮುತ್ತ ಓಡಾಡಿಕೊಂಡು ಇದ್ದನಂತೆ. ಅಂದರೆ, ಆತನಿಗೆ ಮತ್ತು ಅವನು ಎಸಗಿದ ರೇಸಿಸ್ಟ್ ಕೆಲಸಕ್ಕೆ ಸಾವಿರಾರು ಸಂಖ್ಯೆಯ ನಮ್ಮದೇ ಜನರ ಸಮ್ಮತಿ ಅಥವ ಪ್ರೋತ್ಸಾಹ ಇತ್ತು ಮತ್ತು ಈಗಲೂ ಇದೆ ಎಂದಾಗಲಿಲ್ಲವೆ?

ಎರಡನೆಯ ಪತ್ರಿಕಾ ವರದಿ ಕನ್ನಡಪ್ರಭದ್ದು: ಮೂರು ವರ್ಷಗಳ ಹಿಂದೆ ಕೆಲವು ಮತಾಂಧರು ಉಡುಪಿಯ ಬಳಿ ಇಬ್ಬರು ಅನ್ಯಮತೀಯರನ್ನು ಬೆತ್ತಲೆ ಮಾಡಿ ಎಳೆದಾಡಿದ್ದರು. ಆ ಘಟನೆಯ ಫೋಟೋಗಳು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ಬಂದಿತ್ತು. ಈಗ ಆ ಇಡೀ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತ ಮಾಡಿದೆ. ಸಾಕ್ಷ್ಯಾಧಾರಗಳು ಇಲ್ಲವಂತೆ!
ನಮ್ಮದೇ ನಾಡಿನಲ್ಲಿ ಶತಶತಮಾನಗಳಿಂದ ತಾರತಮ್ಯ ಮಾಡಿಕೊಂಡು ಬಂದಿದ್ದಷ್ಟೆ ಅಲ್ಲದೆ, ಈಗಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಹ ವ್ಯವಸ್ಥೆ ಇಲ್ಲ ಎಂದಾದರೆ ಬೇರೆ ಇನ್ಯಾವುದೊ ದೇಶದಲ್ಲಿನ ತಾರತಮ್ಯದ ಬಗ್ಗೆ ಮಾತನಾಡುವುದಕ್ಕೆ ನಮಗೆ ಯಾವ ಹಕ್ಕಿದೆ? ಒಟ್ಟಾರೆ ಭಾರತೀಯ ಸಮಾಜ ಅಂತಹ ಹಕ್ಕುಗಳನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕಿದೆ... ಅಲ್ಲವೆ?




3 comments:

ಕುಕೂಊ.. said...

ತುಂಬಾ ಅರ್ಥಪೂರ್ಣವಾದ ಬರಹ.

MD said...

ಒಳ್ಳೆಯ ಪರಾಮರ್ಶೆಗೆ ಹಚ್ಚುವ ಬರಹ.
ಭಾರತೀಯರಾದ ನಮಗೆ ಈ ಬೌದ್ಧಿಕ ಸ್ವಾತಂತ್ರ್ಯದ ಅವಶ್ಯಕತೆ ತುಂಬಾ ಇದೆ.
ಭಾರತ ಮತ್ತು ಇಲ್ಲಿನ ನಮ್ಮ ಪರಂಪರೆ ಎಂದೆಂದಿಗೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ.
ಮುಂದೆಯೂ ನಮ್ಮಲ್ಲಿ ಮಾನವೀಯ ಮೌಲ್ಯಗಳು ಉಳಿಯಲಿ ಬೆಳೆಯಲಿ ಭಾರತ ಶಾಂತಿಯ ಸಹಬಾಳ್ವೆಯ ದ್ಯೋತಕವಾಗಲಿ.

Anonymous said...

VERY BLACK!